ಬೆಂಗಳೂರು: 2018ರಲ್ಲಿ ಖರ್ಗೆ ಮುಖ್ಯಮಂತ್ರಿಯಾಗುವುದನ್ನು ಕಾಂಗ್ರೆಸ್’ನ ಒಳಗಿನ ನಾಯಕರೇ ತಡೆದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಟ್ವೀಟ್’ಗೆ ಸರಣಿ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿರುವ ಅವರು, ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್ ಅತಿರಥ ಮಹಾರಥರು ಪಕ್ಷದ ಟ್ವೀಟರ್ ಖಾತೆ ಮೂಲಕ ದಾಲಿ ಮಾಡಿ ಓಡಿ ಹೋಗಿದ್ದಾರೆಂದು ಲೇವಡಿ ಮಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಕಾಂಗ್ರೆಸ್’ಗೆ ಸಲಹೆ ನೀಡಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿ ಎಂದಿದ್ದರು.
ಖರ್ಗೆ ಮುಖ್ಯಮಂತ್ರಿಯಾಗುವುದನ್ನು ಕಾಂಗ್ರೆಸ್’ನ ಒಳಗಿನ ನಾಯಕರೇ ತಡೆದಿದ್ದರು. ಆ ನಾಯಕರು ಯಾರುಎಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು. ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆಂದೂ ಕಾಂಗ್ರೆಸ್ ನಾಯಕರು ಪಕ್ಷದ ಟ್ವಿಟರ್ ಮೂಲಕ ದಾಳಿ ಮಾಡಿದ್ದಾರೆ.
Follow us on Social media