ಚೆನ್ನೈ: ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 482 ರನ್ ಗಳ ದಾಖಲೆಯ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭಿಕ 3 ವಿಕೆಟ್ ಗಳನ್ನು ಕಳೆದುಕೊಂಡಿದೆ.
2ನೇ ಟೆಸ್ಟ್ ನ ಮೂರನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಮತ್ತು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅದ್ಭುತ ಬ್ಯಾಟಿಂಗ್ ಮಾಡಿದ್ದು ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 482 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಈ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ಆರಂಭಿಕವಾಗಿ ರೊರ್ರಿ ಬರ್ನ್ಸ್ 25, ಡೂಮ್ ಸಿಬ್ಲೆ 3, ಜಾಕ್ ಲೀಚ್ ಶೂನ್ಯಕ್ಕೆ ಔಟಾಗಿದ್ದಾರೆ.
ಇನ್ನು ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ನ ನಾಯಕ ಅಜೇಯ 2 ಮತ್ತು ಡಾನ್ ಲಾರೆನ್ಸ್ ಅಜೇಯ 19 ರನ್ ಗಳಿಸಿದ್ದು ನಾಲ್ಕನೇ ದಿನದಾಟವನ್ನು ಆರಂಭಿಸಲಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 329 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವನ್ನು 134 ರನ್ ಗಳಿಗೆ ಆಲೌಟ್ ಮಾಡಿ 195 ರನ್ ಗಳ ಮುನ್ನಡೆಯೊಂದಿಗೆ ಭಾರತ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿತ್ತು. ಇಂದು 286 ರನ್ ಗಳಿಗೆ ಭಾರತ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ ಗೆ 482 ರನ್ ಗಳ ಗುರಿ ನೀಡಿತ್ತು.
ಬ್ಯಾಟಿಂಗ್ ನಲ್ಲೂ ಮಿಂಚಿದ ಅಶ್ವಿನ್ ಶತಕ(106) ಸಿಡಿಸಿ ಔಟಾದರು. ಇನ್ನು ಕೊಹ್ಲಿ 62 ರನ್ ಪೇರಿಸಿದ್ದರೆ ರೋಹಿತ್ ಶರ್ಮಾ 26, ಮೊಹಮ್ಮದ್ ಸಿರಾಜ್ 16 ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಜಾಕ್ ಲೀಚ್ ಮತ್ತು ಮೊಯಿನ್ ಅಲಿ ತಲಾ 4 ವಿಕೆಟ್ ಪಡೆದಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದಿಂದ ಮುನ್ನಡೆ ಗಳಿಸಿದೆ. ಇನ್ನು ಈ ಪಂದ್ಯ ಭಾರತಕ್ಕೆ ಅತೀ ಮುಖ್ಯವಾಗಿದೆ.
Follow us on Social media