ಬೆಂಗಳೂರು: ಅಮೆರಿಕ ಮೂಲದ ತಂತ್ರಜ್ಞಾನ ಸಂಸ್ಥೆ ಕಾಗ್ನಿಜೆಂಟ್ ಭಾರತದಾದ್ಯಂತ ಸುಮಾರು 18 ಸಾವಿರ ಉದ್ಯೋಗಿಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಲು ಒತ್ತಡ ಹೇರುತ್ತಿದೆ ಎಂದು ಕರ್ನಾಟಕ ಮತ್ತು ಚೆನ್ನೈ ಐಟಿ ಉದ್ಯೋಗಿಗಳ ಒಕ್ಕೂಟ ಆರೋಪಿಸಿದೆ.
ಪ್ರಾಜೆಕ್ಟ್ ಗಳನ್ನು ಈ ಕೋವಿಡ್-19 ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾರತದಲ್ಲಿರುವ ತನ್ನ ಉದ್ಯೋಗಿಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಲು ಕಾಗ್ನಿಜೆಂಟ್ ಕಂಪೆನಿ ಹೇಳುತ್ತಿದೆ. ಈ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ವ್ಯವಸ್ಥಾಪಕರ ಒತ್ತಡಕ್ಕೆ ಮಣಿದು ಕೆಲಸಕ್ಕೆ ರಾಜೀನಾಮೆ ನೀಡಬೇಡಿ ಎಂದು ಎಲ್ಲಾ ಕಾಗ್ನಿಜೆಂಟ್ ಉದ್ಯೋಗಿಗಳಿಗೆ ಕರೆ ನೀಡುವ ಅಭಿಯಾನ ಆರಂಭಿಸಲಾಗಿದೆ ಎಂದು ಕರ್ನಾಟಕ ಐಟಿ ಉದ್ಯೋಗಿಗಳ ಒಕ್ಕೂಟದ(ಕೆಐಟಿಯು) ವಕ್ತಾರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಸಾಮೂಹಿಕವಾಗಿ ಉದ್ಯೋಗಿಗಳಿಗೆ ರಾಜೀನಾಮೆ ನೀಡಲು ಹೇಳುವುದು ಕಾರ್ಮಿಕ ಕಾನೂನಿಗೆ ವಿರುದ್ಧವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ದೂರು ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕಾಗ್ನಿಜೆಂಟ್ ಕಂಪೆನಿಯ ಉದ್ಯೋಗಿಯೊಬ್ಬರು, ಹೊಸ ಪ್ರಾಜೆಕ್ಟ್ ಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಕೆಲಸ ಇಲ್ಲದಿರುವುದರಿಂದ ಇನ್ನು ಒಂದು-ಒಂದೂವರೆ ತಿಂಗಳಲ್ಲಿ ರಾಜೀನಾಮೆ ಕೊಡಿ ಎಂದು ಮ್ಯಾನೇಜ್ ಮೆಂಟ್ ಒತ್ತಡ ಹಾಕುತ್ತಿದೆ ಎಂದು ಹೇಳಿದ್ದಾರೆ.
ಯಾವುದೇ ಕಂಪೆನಿ 100ಕ್ಕಿಂತ ಹೆಚ್ಚು ಮಂದಿ ಉದ್ಯೋಗಿಗಳನ್ನು ಹೊಂದಿದ್ದರೆ ಅಲ್ಲಿ ಸಾಮೂಹಿಕ ರಾಜೀನಾಮೆ ಉದ್ಯೋಗಿಗಳಿಂದ ಕೊಡಿಸಲು ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಕೆಲಸವಿಲ್ಲ ಎಂದು ಹಠಾತ್ತನೆ ರಾಜೀನಾಮೆ ಕೊಡಿ ಎಂದು ನೌಕರರಲ್ಲಿ ಹೇಳುವುದು ಕಾನೂನಿಗೆ ವಿರುದ್ಧ. ಕಂಪೆನಿಯವರು ಕೇಳಿದರೆ ರಾಜೀನಾಮೆ ಕೊಡಬೇಡಿ ಎಂದು ನಾವು ಉದ್ಯೋಗಿಗಳಿಗೆ ಹೇಳುತ್ತಿದ್ದೇವೆ ಎಂದು ಕೆಐಟಿಯು ವಕ್ತಾರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ದೇಶಾದ್ಯಂತ ಐಟಿ ವಲಯಗಳಲ್ಲಿ ತೀವ್ರ ಸಂಕಷ್ಟ ಎದುರಾಗಿದ್ದು ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಕಾರ್ಮಿಕ ಇಲಾಖೆ ಮೊರೆ ಹೋಗುತ್ತಿದ್ದಾರೆ.
ಈ ಬಗ್ಗೆ ಕಾಗ್ನಿಜೆಂಟ್ ಕಂಪೆನಿಯ ಮುಖ್ಯಸ್ಥರಿಂದ ಪ್ರತಿಕ್ರಿಯೆ ಕೇಳೋಣವೆಂದು ಇ ಮೇಲ್ ಹಾಕಿದರೆ ಅಲ್ಲಿಂದ ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ.
Follow us on Social media