ಮಂಗಳೂರು: ಕುಡುಪು ಬಳಿ ಸಂಶಯಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾದ ಪ್ರಕರಣ ಸಂಬಂಧ 15 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದ್ದಾರೆ.
ನಗರದ ಹೊರ ವಲಯದ ಕುಡುಪು ಬಳಿ ರವಿವಾರ (ಏ.27) ಸಂಜೆ ವೇಳೆ ಕಲ್ಲಿನಿಂದ ಜಜ್ಜಿ ಕೊ*ಲೆಯಾದ ಸ್ಥಿತಿಯಲ್ಲಿ ಅಂದಾಜು 35ರಿಂದ 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು.
ಕೊಲೆಯಾದವರು ಯಾರು ಮತ್ತು ಯಾವ ಉದ್ದೇಶಕ್ಕೆ ಕೃತ್ಯ ಮಾಡಿದ್ದಾರೆ ಎನ್ನುವ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದರು.
ಕುಡುಪು ಬಳಿಯ ಅಪರಿಚಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾಗಿರುವ ಆರೋಪದಡಿ 15 ಮಂದಿಯನ್ನು ಬಂಧಿಸಲಾಗಿದೆ. ಕ್ರಿಕೆಟ್ ಪಂದ್ಯಾಕೂಟ ನಡೆಯುತ್ತಿದ್ದಾಗ ಅಲ್ಲಿಗೆ ಬಂದಿದ್ದ ಅಪರಿಚಿತ ವ್ಯಕ್ತಿ ಮತ್ತು ಅಲ್ಲಿದ್ದ ಯುವಕರ ಗುಂಪಿನ ನಡುವೆ ಗಲಾಟೆಯಾಗಿ ಹಲ್ಲೆ ಮಾಡಲಾಗಿದೆ. ಈ ವೇಳೆ ವ್ಯಕ್ತಿಗೆ 30ಕ್ಕೂ ಅಧಿಕ ಮಂದಿ ಹಲ್ಲೆ ಮಾಡಿರುವ ಸಾಧ್ಯತೆಯಿದೆ. ಪರಿಣಾಮ ಮಾರಣಾಂತಿಕ ಹಲ್ಲೆಯಾಗಿ ಬಲವಾದ ಪೆಟ್ಟು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದಿದ್ದಾರೆ.
ಈ ಸಂಬಂಧ 15 ಮಂದಿಯನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನೂ ಶೀಘ್ರದಲ್ಲಿ ಬಂಧಿಸಲಾಗುವುದು. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆತ ಬಿಹಾರ, ಬಂಗಾಳ ಮೂಲದ ವ್ಯಕ್ತಿಯಾಗಿರುವ ಸಾಧ್ಯತೆಯಿದೆ ಎಂದಿದ್ದಾರೆ.
Follow us on Social media