ಉಡುಪಿ: ಮಹಿಳೆಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕಡೆಕಾರ್ ನಿವಾಸಿ ರಕ್ಷಾ ಅವರು 2024ರ ಎ.22ರಂದು ಪ್ರಜ್ವಲ್ ಅವರೊಂದಿಗೆ ಉಡುಪಿಯಲ್ಲಿ ವಿವಾಹವಾಗಿದ್ದರು.
ವಿವಾಹದ ಸಂಪೂರ್ಣ ಖರ್ಚನ್ನು ರಕ್ಷಾ ಅವರ ಮನೆಯವರೇ ಭರಿಸಿದ್ದರು. ಮದುವೆಯಾಗಿ 5-6 ತಿಂಗಳ ಸಮಯ ರಕ್ಷಾ ಅವರು ಗಂಡನ ಮನೆಯಲ್ಲಿ ವಾಸವಾಗಿದ್ದು, ಆ ಸಂದರ್ಭದಲ್ಲಿ ಆರೋಪಿಗಳಾದ ಪ್ರಜ್ವಲ್ (40), ಭವಾನಿ (74), ಸೌಮ್ಯಾ (36), ಲಜಿತ್ (38) ಅವರು ರಕ್ಷಾ ಅವರನ್ನು ಹೀಯಾಳಿಸಿ, ನಿಂದಿಸಿ ಮನೆಯ ಎಲ್ಲ ಕೆಲಸಗಳನ್ನು ಮಾಡಿಸಿ ದರ್ಪ ತೋರಿಸುತ್ತಿದ್ದರು.
ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಪದೇ ಪದೇ ಮನೆಬಿಟ್ಟು ಹೋಗುವಂತೆ ಹೆದರಿಸುತ್ತಿದ್ದು, ಮನೆಯಲ್ಲಿ ಇರಬೇಕಾದರೆ 16 ಲ.ರೂ. ತಂದು ಕೊಡುವಂತೆ ಹಾಗೂ ಮನೆಗೆ ಬೇಕಾದ ವಸ್ತುಗಳು ಮತ್ತು ರಕ್ಷಾ ಅವರ ಮನೆಯಲ್ಲಿದ್ದ ದ್ವಿಚಕ್ರ ವಾಹನವನ್ನು ತಂದು ಕೊಡಬೇಕೆಂದು ಪೀಡಿಸುತ್ತಿದ್ದರು. ಪ್ರಜ್ವಲ್ ಹಲವಾರು ಬಾರಿ ರಕ್ಷಾ ಅವರಿಗೆ ಬೆಲ್ಟ್‌ನಿಂದ ಹೊಡೆದಿದ್ದು ಇದಕ್ಕೆ ಉಳಿದ ಆರೋಪಿಗಳು ಪ್ರೋತ್ಸಾಹ ನೀಡುತ್ತಿದ್ದರು.
ಸರಿಯಾಗಿ ಊಟ- ಉಪಚಾರ, ಮೊಬೈಲ್ ಬಳಸಲು ನೀಡುತ್ತಿರಲಿಲ್ಲ. ದುಡಿಮೆಯ ಸಂಬಳವನ್ನು ಪತಿಯು ತನಗೆ ನೀಡುವಂತೆ ಪೀಡಿಸಿ ಹಣ ತೆಗೆದುಕೊಳ್ಳುತ್ತಿದ್ದನು. ಸೆ.5ರಂದು ಆರೋಪಿಗಳು ಬೆದರಿಕೆ ನೀಡಿ ರಸ್ತೆ ಮಧ್ಯದಲ್ಲಿ ಬಿಟ್ಟು ಹೋಗಿದ್ದರು. ಆದರೂ ಕರೆದುಕೊಂಡು ಹೋಗಿರಲಿಲ್ಲ. ಈ ವರ್ಷ ಮಾ.16ರಂದು ರಕ್ಷಾ ಅವರು ಗಂಡನ ಮನೆಗೆ ಹೋದಾಗ ಪತಿಯ ತಾಯಿ ಮತ್ತು ಸಹೋದರಿ ರಕ್ಷಾ ಅವರನ್ನು ಮನೆಯ ಬಾಗಿಲಿನಲ್ಲಿ ತಡೆದು ನಿಲ್ಲಿಸಿ ಕುತ್ತಿಗೆಗೆ ಕೈ ಹಾಕಿ ಬಲವಾಗಿ ಹೊರಗೆ ದೂಡಿ ಬೆದರಿಸಿ ಹಲ್ಲೆ ನಡೆಸಿದ್ದಾರೆ ಎಂದು ರಕ್ಷಾ ಅವರು ಮಹಿಳಾ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
Follow us on Social media