ಉಡುಪಿ: ಮುಸ್ಲಿಂ ಯುವಕ ನನ್ನ ಮಗಳನ್ನು ಅಪಹರಿಸಿದ್ದಾನೆ. ಇದು ಲವ್ ಜಿಹಾದ್ ಷಡ್ಯಂತ್ರವಾಗಿದೆ ಎಂದು ಯುವತಿಯ ತಂದೆ ಇತ್ತೀಚೆಗೆ ಆರೋಪಿಸಿದ್ದರು.
ಈ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಸದ್ಯ ಈ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನ್ಯಾಯಾಲಯಕ್ಕೆ ಹಾಜರಾದ ಯುವತಿ ಜೀನಾ ಮೆರಿಲ್, ಸ್ವಇಚ್ಛೆಯಿಂದ ಮೊಹಮ್ಮದ್ ಅಕ್ರಮ್ ಜೊತೆ ಹೋಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
ತಮ್ಮ ಮಗಳನ್ನ ಅಕ್ರಮ್ ಎಂಬಾತ ಅಪಹರಿಸಿದ್ದಾನೆ ಎಂದು ಪೋಷಕರು ದೂರು ನೀಡಿದ್ದರು. ಯುವತಿಯನ್ನ ಶೀಘ್ರ ಪತ್ತೆ ಹಚ್ಚುವಂತೆ ಆಗ್ರಹಿಸಿ ಪೋಷಕರಿಂದ ಹೈ ಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಗಾಗಿ ಯುವತಿ ಜೀನಾ ಮೆರಿಲ್ ಮತ್ತು ಅಕ್ರಮ್ ತಮ್ಮ ಲಾಯರ್ ಜೊತೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತನ್ನನ್ನು ಯಾರೂ ಕೂಡ ಅಪಹರಿಸಿರುವುದಿಲ್ಲ. ನಾನು ಸ್ವಇಚ್ಛೆಯಿಂದ ಅಕ್ರಮ್ ಜೊತೆ ತೆರಳಿರುವುದಾಗಿ ಹೇಳಿದ್ದಾಳೆ. ಈ ವೇಳೆ ಹುಡುಗಿ ಜೊತೆ ಮಾತನಾಡಲು ತಾಯಿ ಅನುಮತಿ ಕೇಳಿದಾಗ ನ್ಯಾಯಾಧೀಶರು ಕೊಠಡಿಯಲ್ಲೇ ಅವಕಾಶ ನೀಡಿದ್ದು, ಬಳಿಕ ವಿಚಾರಣೆಯಲ್ಲಿ ಮಗಳನ್ನು ತನ್ನ ಜೊತೆ ಕಳಿಸುವಂತೆ ನ್ಯಾಯಾಧೀಶರಲ್ಲಿ ತಾಯಿ ಮನವಿ ಮಾಡಿದರು. ಆದರೆ ಇದಕ್ಕೆ ಯುವತಿ ಒಪ್ಪಿಲ್ಲ.
ತಾನು ಅಕ್ರಮ್ ಜೊತೆ ಏಪ್ರಿಲ್ 19 ರಂದು ರಿಜಿಸ್ಟರ್ ಮದುವೆ ಮಾಡಿಕೊಳ್ಳುತ್ತೇನೆ. ಮದುವೆ ನಂತರ ತಾಯಿಯನ್ನು ಭೇಟಿಯಾಗುವುದಾಗಿ ಯುವತಿ ಭರವಸೆ ನೀಡಿದ್ದು, ತಾಯಿ ಜೊತೆಗೆ ಉತ್ತಮ ಬಾಂಧವ್ಯದೊಂದಿಗೆ ಇರುತ್ತೇನೆ ಎಂದಿದ್ದಾಳೆ. ಸದ್ಯ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏಪ್ರಿಲ್ 22 ರಂದು ನಿಗದಿಪಡಿಸಿದೆ.
Follow us on Social media