ಬೆಳ್ತಂಗಡಿ: ಬೆಳಾಲು ಕಾಡು ಪ್ರದೇಶದಲ್ಲಿ ಪತ್ತೆಯಾದ ಮಗುವಿನ ಪೋಷಕರನ್ನು ಪತ್ತೆ ಮಾಡುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಮಗುವಿನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ ಮಗುವಿನ ಪೋಷಕರನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯ ನಿವಾಸಿ ತಿಮ್ಮಪ್ಪ ಗೌಡರ ಮಗ ಧರ್ಮಸ್ಥಳದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ರಂಜಿತ್ ಗೌಡ (27) ಮತ್ತು ಧರ್ಮಸ್ಥಳ ಗ್ರಾಮದ ಕೊಲಂಗಾಜೆಯ ನಿವಾಸಿ ಸುಶ್ಮಿತಾ ಎಂದು ಗುರುತಿಸಲಾಗಿದೆ. ಮಾರ್ಚ್ 22 ರಂದು ಬೆಳಾಲಿನ ಕಾಡು ಪ್ರದೇಶದಲ್ಲಿ ಪತ್ತೆಯಾದ ಮಗುವನ್ನು ಸಾರ್ವಜನಿಕರು ರಕ್ಷಿಸಿ ಆರೈಕೆ ಮಾಡಿದ್ದರು. ನಂತರ ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ಆಶ್ರಮಕ್ಕೆ ಹಸ್ತಾಂತರಿಸಿದ್ದರು.
ಅಪರಿಚಿತ ಹೆಣ್ಣು ಮಗು ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆಗಿಳಿದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್. ಗಾಣಿಗೇರಾ ಮತ್ತು ತಂಡಕ್ಕೆ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಎಪ್ರಿಲ್ 2 ರಂದು ರಾತ್ರಿ ಮಗುವಿನ ತಂದೆ ಬೆಳಾಲು ನಿವಾಸಿ ರಂಜಿತ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಗುವಿನ ಪೋಷಕರನ್ನು ಪತ್ತೆ ಹಚ್ವುತ್ತಿದ್ದಂತೆಯೇ ಇದೀಗ ಇಬ್ಬರು ಕೂಡ ಸ್ವಇಚ್ಛೆಯಿಂದ ಒಂದು ವಾರದೊಳಗೆ ಮದುವೆಯಾಗುವುದಾಗಿ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಮುಂದೆ ಇಬ್ಬರ ಕುಟುಂಬಸ್ಥರು ಒಪ್ಪಿರುವುದಾಗಿ ತಿಳಿದು ಬಂದಿದೆ.
Follow us on Social media