ಮಣಿಪಾಲ: ಟೈಮಿಂಗ್ ವಿಚಾರಕ್ಕೆ ಬಸ್ ಕಂಡಕ್ಟರ್ಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ಬಸ್ ನಿಲ್ದಾಣದಲ್ಲಿ ನಡೆದಿದೆ.
ಘಟನೆಯ ವಿಡಿಯೋ ವೈರಲ್ ಆಗಿದೆ. ನಡು ರಸ್ತೆಯಲ್ಲಿ ಗಲಾಟೆ ಮಾಡಿಕೊಂಡ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಜುನಾಥ ಬಸ್ಸಿನ ಚಾಲಕ ಉಚ್ಚಿಲದ ಮೊಹಮ್ಮದ್ ಆಲ್ಪಾಜ್ (25), ಹಾಗೂ ಆನಂದ ಬಸ್ಸಿನ ಕಂಡಕ್ಟರ್ ಚಿತ್ರದುರ್ಗದ ವಿಜಯಕುಮಾರ್ (25) ಎಂದು ಗುರುತಿಸಲಾಗಿದೆ.
ಎಪ್ರಿಲ್ 2 ರಂದು ಸಂಜೆ ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವ ಟೈಮಿಂಗ್ ವಿಚಾರದಲ್ಲಿ ಆನಂದ್ ಬಸ್ ನ ಕಂಡಕ್ಟರ್ ವಿಜಯ ಕುಮಾರ್ ಹಾಗೂ ಮಂಜುನಾಥ ಬಸ್ಸಿನ ಚಾಲಕ ಮೊಹಮ್ಮದ್ ಆಲ್ಪಾಜ್ ನಡುವೆ ಗಲಾಟೆ ನಡೆದಿತ್ತು. ಇವರಿಬ್ಬರು ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
Follow us on Social media