ಉಡುಪಿ: ಕೆಲಸ ಮಾಡಿದ ಸಂಬಳದ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಮಲ್ಪೆ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ.
ಸುರೇಶ ಕಲ್ಮಾಡಿ ನೀಡಿದ ದೂರಿನಂತೆ, ನಾನು ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದು, 4 ತಿಂಗಳ ಹಿಂದೆ ಕೊಪ್ಪಲತೋಟದ ನಿವಾಸಿ ಸುರೇಶ ನನ್ನ ಜತೆ 10 ದಿನಗಳ ಕಾಲ ಕೆಲಸ ಮಾಡಿದ್ದ. ಅದರಲ್ಲಿ 4 ದಿನದ ಸಂಬಳ 2 ಸಾವಿರ ರೂ. ಕೊಡಲು ಬಾಕಿ ಇತ್ತು. ಮಾ. 22ರಂದು ಪೇಟೆಯಲ್ಲಿ ಇರುವಾಗ ತನ್ನ ಸಂಬಳ ಕೊಡುವಂತೆ ಸುರೇಶ ಕೇಳಿದ್ದ. ಅಲ್ಲದೆ ಅವಾಚ್ಯವಾಗಿ ಬೈದು, ಹಲ್ಲೆ ಮಾಡಿದ್ದ. ಹಣ ಕೊಡುವವರೆಗೆ ಸ್ಕೂಟರ್ ಇಟ್ಟುಕೊಳ್ಳುತ್ತೇನೆ ಎಂದು ನನ್ನ ಸ್ಕೂಟರನ್ನು ಕೊಂಡುಹೋಗಿದ್ದಾನೆ. ಸಂಜೆ ಸ್ಕೂಟರ್ ತರಲು ಆತನ ಮನೆಗೆ ಹೋದಾಗ ನನಗೆ ಹಾಗೂ ನನ್ನ ಪತ್ನಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಲಾಗಿದೆ.
ನಾನು ನಾಲ್ಕು ತಿಂಗಳ ಹಿಂದೆ ಸುರೇಶ ಕಲ್ಮಾಡಿ ಜತೆಗೆ 10 ದಿನಗಳ ಕಾಲ ಕೆಲಸ ಮಾಡಿಕೊಂಡಿದ್ದು, 4 ದಿನದ ಸಂಬಳ 3,300 ನನಗೆ ಕೊಡಲು ಬಾಕಿ ಇದೆ. ಮಾ.22ರಂದು ಮಲ್ಪೆ ಪೇಟೆಯಲ್ಲಿ ಸುರೇಶ್ ಕಲ್ಮಾಡಿ ಸಿಕ್ಕಿದ್ದು, ಅವರಲ್ಲಿ ಸಂಬಳದ ಬಾಕಿ ಹಣ ಕೇಳಿದ್ದೆ. ಆಗ ಆತ, ಕೊಡುವುದಿಲ್ಲ, ಏನು ಬೇಕಾದರೂ ಮಾಡು. ಪದೇಪದೆ ಕೇಳಿದರೆ ಕೊಂದು ಹಾಕುತ್ತೆನೆ ಎಂದು ಬೆದರಿಕೆ ಹಾಕಿದ್ದಾನೆ. ಹಣ ಕೊಡುವವರೆಗೆ ಸ್ಕೂಟರನ್ನು ನಾನು ಉಪಯೋಗಿಸುತ್ತೇನೆ ಎಂದು ಸ್ಕೂಟರನ್ನು ತೆಗೆದುಕೊಂಡು ಬಂದಿದ್ದೇನೆ. ರಾತ್ರಿ 7 ಗಂಟೆಗೆ ವೇಳೆಗೆ ಸುರೇಶ ಮತ್ತು ಆತನ ಪತ್ನಿ ಬಂದು ಜೋರಾಗಿ ಬೊಬ್ಬೆ ಹಾಕಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೊಪ್ಪಲತೋಟದ ಸುರೇಶ ನೀಡಿದ ಪ್ರತಿದೂರಿನಲ್ಲಿ ತಿಳಿಸಲಾಗಿದೆ.
ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow us on Social media