ಕಾರ್ಕಳ: ಸಾಲದ ಸುಳಿಯಲ್ಲಿ ಸಿಲುಕಿದ್ದ ಕಡಂದಲೆ ನಿವಾಸಿ ವಿಶ್ವನಾಥ್ ಅವರು, ತನಗೆ ಯಾರೋ ದುಷ್ಕರ್ಮಿಗಳು ಮೆಣಸಿನ ಹುಡಿ ಎರಚಿ ತನ್ನಲ್ಲಿದ್ದ 70 ಸಾವಿರ ರೂ. ಹಣ ದೋಚಿದರೆಂದು ಕಥೆ ಕಟ್ಟಿದ ಪ್ರಕರಣವೊಂದು ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೋಳ ಗ್ರಾಮದ ಅಂಬರಾಡಿಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ
ಮರದ ಕೆಲಸ ಮಾಡುತ್ತಿರುವ ವಿಶ್ವನಾಥ್ ಬುಧವಾರ ರಾತ್ರಿ ಅಂಬರಾಡಿಯಲ್ಲಿ ರಸ್ತೆ ಬದಿ ಬಿದ್ದಿದ್ದನ್ನು ನೋಡಿ ಅವರನ್ನು ಅದೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ವಿಚಾರಿಸಿದರು. ಆಗ, ತನಗೆ ಯಾರೋ ಮೆಣಸಿನ ಹುಡಿ ಎರಚಿ, ತನ್ನಲ್ಲಿದ್ದ 70 ಸಾವಿರ ರೂ.ದೋಚಿ ಪರಾರಿಯಾಗಿದ್ದಾರೆಂದು ವಿಶ್ವನಾಥ್ ತಿಳಿಸಿದ್ದ. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಿದರು.
ತನಿಖೆ ನಡೆಸಿದ ಪೊಲೀಸರಿಗೆ ವಿಶ್ವನಾಥ್ ಆರೋಪಿಸಿದ್ದಕ್ಕೆ ಪೂರಕವಾದ ಯಾವುದೇ ಅಂಶಗಳು ಸಿಗಲಿಲ್ಲ. ಬದಲು ವಿಶ್ವನಾಥ್ ಬಗ್ಗೆಯೇ ಸಂಶಯ ಬರುವಂತಹ ವಿಷಯಗಳು ಸಿಕ್ಕಿದವು. ವಿಶ್ವನಾಥ್ ಅಂಗಡಿಯೊಂದರಿಂದ ಮೆಣಸಿನ ಹುಡಿ ಖರೀದಿಸಿದ್ದು, ಪೊಲೀಸರಿಗೆ ತಿಳಿಯಿತು. ತನಿಖೆಯನ್ನು ಮತ್ತಷ್ಟು ಆಳವಾಗಿ ನಡೆಸಿದಾಗ ಬೋಳ ಪಂಚಾಯತ್ ಮಾರ್ಗವಾಗಿ ಕಡಂದಲೆಗೆ ಹೋಗುವ ವೇಳೆ ಅಂಬರಾಡಿ ಪರಿಸರದಲ್ಲಿ ವಿಶ್ವನಾಥನೇ ಮೆಣಸಿನ ಹುಡಿಯನ್ನು ಮೈಗೆ ಎರಚಿಕೊಂಡು, ಬಟ್ಟೆ ಹರಿದುಕೊಂಡು ಬೈಕ್ ಸಹಿತ ರಸ್ತೆ ಬಿದ್ದಂತೆ ನಾಟಕ ಆಡಿರುವುದು ತಿಳಿಯಿತು. ಈ ಬಗ್ಗೆ ಆತನನ್ನು ವಿಚಾರಿಸಿದಾಗ ಸತ್ಯ ಒಪ್ಪಿಕೊಂಡ. ಸಾಲದ ಸುಳಿಯಲ್ಲಿ ಸಿಲುಕಿದ್ದುದೇ ಈತ ನಾಟಕವಾಡಲು ಕಾರಣ ಎಂದು ತಿಳಿದುಬಂದಿದೆ. ಪೊಲೀಸರು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಪ್ರಕರಣ ದಾಖಲಾಗಿಲ್ಲ.
Follow us on Social media