Breaking News

ಮಾ. 21 ನಾಳೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ: ಉಭಯ ಜಿಲ್ಲೆಗಳಲ್ಲಿ 44,913 ಪರೀಕ್ಷಾರ್ಥಿಗಳು

ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯು ದಕ್ಷಿಣ ಕನ್ನಡ ಜಿಲ್ಲೆಯ 92 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 29760 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ಒಟ್ಟು 2057 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಾಲೆಗಳ ಮೂಲಕ ಒಟ್ಟು 28446 (14735 ಬಾಲಕರು ಹಾಗೂ 13711 ಬಾಲಕಿಯರು)ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಇವರಲ್ಲಿ 8892 ಸರಕಾರಿ ಶಾಲೆಯ ವಿದ್ಯಾರ್ಥಿಗಳಾದರೆ, 7864 ಅನುದಾನಿತ ಹಾಗೂ 11690 ಮಂದಿ ಅನುದಾನ ರಹಿತ ಶಾಲೆಯ ವಿದ್ಯಾರ್ಥಿ ಗಳಾಗಿದ್ದಾರೆ. ಖಾಸಗಿಯಾಗಿ ಮೊದಲ ಬಾರಿಗೆ ಪರೀಕ್ಷೆ ಬರೆಯಲು 831 ವಿದ್ಯಾರ್ಥಿಗಳು (579 ಬಾಲಕರು ಹಾಗೂ 252 ಬಾಲಕಿಯರು), ಪುನರಾವರ್ತಿತ ಒಟ್ಟು 259 ವಿದ್ಯಾರ್ಥಿಗಳು (211 ಬಾಲಕರು, 48 ಬಾಲಕಿಯರು) ಹಾಗೂ ಖಾಸಗಿಯಾಗಿ ಪುನರಾವರ್ತಿತರಾಗಿ ಒಟ್ಟು 217 ವಿದ್ಯಾರ್ಥಿಗಳು (179 ಬಾಲಕರು, 38 ಬಾಲಕಿಯರು) ಭಾಗವಹಿಸುವರು.

ಜಿಲ್ಲೆಯ 521 ಶಾಲೆಯ ಒಟ್ಟು 29760 ವಿದ್ಯಾರ್ಥಿಗಳು 92 ಕೇಂದ್ರದಲ್ಲಿ ಪರೀಕ್ಷೆ ಬರೆಯುವರು. 1332 ಪರೀಕ್ಷಾ ಕೊಠಡಿಗಳು ಹಾಗೂ 1678 ಸಿಸಿಕ್ಯಾಮರಾ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ 184 ಪೊಲೀಸ್‌ ಸಿಬಂದಿ ಹಾಗೂ ಪರೀಕ್ಷಾ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಾಟಕ್ಕೆ 34 ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಡಿಡಿಪಿಐ ಗೋವಿಂದ ಮಡಿವಾಳ ತಿಳಿಸಿದ್ದಾರೆ.

ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯು ಮಾ.21ರಿಂದ ಎ.4ರವರೆಗೆ ಜಿಲ್ಲೆಯ 51 ಕೇಂದ್ರಗಳಲ್ಲಿ ನಡೆಯಲಿದ್ದು ಹೊಸಬರು, ಪುನರಾವರ್ತಿತರು, ಖಾಸಗಿ ಅಭ್ಯರ್ಥಿಗಳು ಸೇರಿ 14153 ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದರು.

ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 115 ಸರಕಾರಿ, 68 ಅನುದಾನಿತ ಹಾಗೂ 89 ಅನುದಾನ ರಹಿತ ಶಾಲೆಗಳು ಸೇರಿದಂತೆ 7152 ಬಾಲಕರು, 6646 ಬಾಲಕಿಯರು ಸೇರಿ 13798 ಹೊಸ ವಿದ್ಯಾರ್ಥಿಗಳು, ಖಾಸಗಿ, ಪುನರಾವರ್ತಿತ ಸೇರಿ 259 ಪುರುಷ ಹಾಗೂ 106 ಮಹಿಳಾ ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿಸಿದರು.

ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಮತ್ತು ಉತ್ತರ ಪತ್ರಿಕೆಗಳನ್ನು ಪಡೆಯಲು ಜಿಲ್ಲೆಯಲ್ಲಿ 22 ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ. ಎಲ್ಲ ಕೇಂದ್ರಗಳಿಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಪ್ರಥಮ ಚಿಕಿತ್ಸೆಗಾಗಿ ಆರೋಗ್ಯ ಕಾರ್ಯಕರ್ತರನ್ನು ನೇಮಿಸಲಾಗಿದೆ. ಪರೀಕ್ಷೆ ನಡೆಸಲು 1013 ಸಿಬಂದಿ ನಿಯೋಜಿಸಲಾಗಿದೆ ಎಂದರು.

ಈ ಬಾರಿ ಪರೀಕ್ಷೆ ಬರೆಯುವ ಬಾಲಕರಿಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ದಿನದಂದು ಬಸ್‌ನಲ್ಲಿ ಹಾಲ್‌ ಟಿಕೆಟ್‌ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷಾ ಕೇಂದ್ರದ ಎದುರು ಬಸ್ಸು ನಿಲ್ಲಿಸಲೂ ಸೂಚಿಸಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×