ಉಡುಪಿ: ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 18 ರಂದು ಈ ಘಟನೆ ನಡೆದಿದ್ದು, ಮಹಿಳೆ ಮೇಲಿನ ಹಲ್ಲೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೀಡಿಯೋದಲ್ಲಿ ಉದ್ರಿಕ್ತ ಗುಂಪು ಮಹಿಳೆಗೆ ಕಪಾಳ ಮೋಕ್ಷ ಮಾಡುವುದನ್ನು ಕಾಣಬಹುದಾಗಿದೆ. ಬಳಿಕ ಮರಕ್ಕೆ ಕಟ್ಟಿ ಹಾಕಿ ಮತ್ತೆ ಹಲ್ಲೆ ನಡೆಸಿದ್ದಾರೆ. ಪಕ್ಕದಲ್ಲಿದ್ದವರು ಯಾರೂ ತಡೆಯಲು ಮುಂದಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಜಯನಗರ ಜಿಲ್ಲೆಯ ನಿವಾಸಿಯಾಗಿದ್ದು,ಮೀನು ಕಳ್ಳತನ ಮಾಡುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆಕೆಯ ಮೇಲೆ ಹಲ್ಲೆ ನಡೆಸಿದ ಮಹಿಳೆಯನ್ನು ಲಕ್ಷ್ಮಿ ಬಾಯಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ಜೊತೆಗೆ ಸುಂದರ್, ಶಿಲ್ಪಾ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ತಿಳಿಸಿದ್ದಾರೆ.
Follow us on Social media