ಉಡುಪಿ : ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಸಾಮಾಜಿಕ ನ್ಯಾಯದಡಿ ನಾನು ಪ್ರಬಲ ಅಕಾಂಕ್ಷಿ ಎಂದು ಮೊಗವೀರ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ನನಗೆ ಟಿಕೆಟ್ ನೀಡುವ ಭರವಸೆಯನ್ನು ಬಿಜೆಪಿ ನೀಡಿಲ್ಲ; ಆದರೆ ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ.
ಒಂದೊಮ್ಮೆ ಬೇರೆಯವರಿಗೆ ಟಿಕೆಟ್ ನೀಡಿದರೆ ಅವರ ಪರವಾಗಿ ಕೆಲಸ ಮಾಡುತ್ತೇನೆ.
ಪಕ್ಷ ಯಾವ ಜವಾಬ್ಬಾರಿ ನೀಡಿದರೂ ನಿರ್ವಹಿಸಲು ಸಿದ್ಧನಿದ್ದೇನೆ.
ಈ ವರೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಈ ಕ್ಷೇತ್ರದ ಸಂಸದರಾಗಿರುವ ಶೋಭಾ ಕರಂದ್ಲಾಜೆ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಸ್ಪರ್ಧೆ ಮಾಡುತ್ತಾರೆಯೇ ಮಾಡುವುದಿಲ್ಲವೇ ಎನ್ನುವುದನ್ನು ಸ್ಪಷ್ಟ ಪಡಿಸಿಲ್ಲ. ಒಂದೊಮ್ಮೆ ಅವರಿಗೆ ಪಕ್ಷ ಟಿಕೆಟ್ ಕೊಟ್ಟರೆ ಒಬ್ಬ ಕಾರ್ಯಕರ್ತನಾಗಿ ಅವರ ಪರವಾಗಿ ದುಡಿಯಲು ಸಿದ್ದನಿದ್ದೇನೆ ಎಂದರು.
ಬಿಜೆಪಿಯಲ್ಲಿ ವಲಸಿಗರು ಮತ್ತು ಮೂಲದವರು ಎಂದು ನೋಡುವುದಿಲ್ಲ. ಮೆರಿಟ್ ಮಾತ್ರ ಪರಿಗಣಿಸಲಾಗುತ್ತದೆ. ಈ ಮೆರಿಟ್ ನಲ್ಲಿ ನಾನು ಪಾಸಾಗುತ್ತೇನೆ ಎಂಬ ವಿಶ್ವಾಸವಿದೆ.
ಹಾಗೆ ನೋಡಿದರೆ ಬಿಜೆಪಿಯ ಆಯಕಟ್ಟಿನ ಜಾಗದಲ್ಲಿ ಈಗ ಮಾಜಿ ಕಾಂಗ್ರಸಿಗರೇ ಹೆಚ್ಚು ಮಂದಿ ಇದ್ದಾರೆ ಎಂದು ತಿಳಿಸಿದರು.
ನಾನು ಬಿಜೆಪಿಯನ್ನು ತೊರೆಯುವ ಸಾಧ್ಯತೆ ಇದೆ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದ ಪ್ರಮೋದ್ ಮಧ್ವರಾಜ್, ನಾನು ಸಾಯುವ ತನಕ ಬಿಜೆಪಿಯಲ್ಲಿಯೇ ಇರಲು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟ ಪಡಿಸುತ್ತೇನೆ.
ಈ ಮೂಲಕ ಅಪ ಪ್ರಚಾರಗಳಿಗೆ ತೆರೆ ಎಳೆಯಲು ಪ್ರಯತ್ನ ಮಾಡುತ್ತೇನೆ ಎಂದು ವಿವರಿಸಿದರು.
Follow us on Social media