ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಮವಾರ ಸಂಜೆಯೊಳಗೆ 10 ಸಾವಿರ ಹಾಸಿಗೆ ವ್ಯವಸ್ಥೆ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಆಸ್ಪತ್ರೆಗಳಾಗಿ ಪರಿವರ್ತನೆಯಾದಂತವುಗಳಿಗೆ ವೆಂಟಿಲೇಟರ್ , ಹೆಚ್ಚಿನ ಹರಿವಿನ ಆಮ್ಲಜನಕ ಮಾರ್ಗ ಮತ್ತಿತರ ಸೌಕರ್ಯಗಳು ಇರಲಿವೆ.ಕೋವಿಡ್- 19 ಸೋಂಕಿನ ಲಕ್ಷಣವಿರುವ ಪ್ರಕರಣಗಳನ್ನು ಅಲ್ಪ, ಸಾಧಾರಣಾ ಹಾಗೂ ತೀವ್ರ ರೀತಿಯ ಕೇಸ್ ಗಳೆಂದು ಪರಿಗಣಿಸಿ ಚಿಕಿತ್ಸೆ ನೀಡಲು ಶಿಷ್ಟಾಚಾರ ಸಿದ್ಧಪಡಿಸುವಂತೆ ಪರಿಣಿತರು ಸೂಚಿಸಿದ್ದಾರೆ ಎಂದಿದ್ದಾರೆ.
ಕೋವಿಡ್-19 ಚಿಕಿತ್ಸೆಗಾಗಿ ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲು ಇರಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ.
ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಜೊತೆಗೆ ಮಾತುಕತೆ ನಡೆಸಲಾಗುತ್ತಿದ್ದು, ಅವರ ಚಿಕಿತ್ಸೆ ವೆಚ್ಚದ ವಿವರವನ್ನು ನೀಡಲಿದ್ದಾರೆ.
ಖಾಸಗಿ ವೈದ್ಯಕೀಯ ಕಾಲೇಜ್ ಗಳ ಎಲ್ಲಾ ಸಾಮರ್ಥ್ಯವನ್ನು ಪರೀಕ್ಷೆಗೆ ಬಳಸಿಕೊಳ್ಳುವ ಸಾಧ್ಯತೆಯೂ ಇರುವುದಾಗಿ ಅವರು ತಿಳಿಸಿದ್ದಾರೆ.
ಬಿಡಿಎ ಹಾಗೂ ವಸತಿ ಇಲಾಖೆ ನಿರ್ಮಿಸಿರುವ ಬಹು ಅಂತಸ್ಥಿನ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಬಳಸಿಕೊಳ್ಳಲಾಗುವುದು, ಬಿಡಿಎಯ ಸುಮಾರು 1700 ಫ್ಲಾಟ್ ಗಳಿದ್ದು, ಬಳಕೆ ಮಾಡಿಕೊಳ್ಳಬಹುದಾದ ಫ್ಲಾಟ್ ಗಳ ಸಂಖ್ಯೆಯನ್ನು ಬಿಡಿಎ ಆಯುಕ್ತ ಮಹಾದೇವ್ ಸೋಮವಾರ ಖಚಿತಪಡಿಸಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಹೊರತುಪಡಿಸಿದಂತೆ 3 ಸಾವಿರ ಖಾಸಗಿ ನಿವಾಸಿಗಳ ಕಾಪ್ಲೆಂಕ್ಸ್ ಗಳು ರೆರಾ ಮತ್ತು ವಸತಿ ಇಲಾಖೆ ಅಡಿಯಲ್ಲಿ ನೋಂದಣಿಯಾಗಿದ್ದು, ಅವುಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಕ್ರೀಡಾ ಇಲಾಖೆ ಮತ್ತು ಖಾಸಗಿಯವರ ಅಡಿಯಲ್ಲಿ ಬರುವ ಕ್ರೀಡಾಂಗಣಗಳು, ಕ್ರೀಡಾ ಸಂಕೀರ್ಣಗಳು, ಹಾಸ್ಟೆಲ್ ಗಳು ಮತ್ತು ದೊಡ್ಡ ವಾಣಿಜ್ಯ ಸಂಕೀರ್ಣಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕನಿಷ್ಠ ಪಕ್ಷ 10 ಸಾವಿರ ಹಾಸಿಗೆ ಸಾಮರ್ಥ್ಯವನ್ನು ವ್ಯವಸ್ಥೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಎಸ್ ಆರ್ ಪಿ, ಹೋಮ್ ಗಾರ್ಡ್ಸ್, ಎನ್ ಸಿಸಿ ಕೆಡಿಟ್ ಗಳು ಮತ್ತು ಅರೆ ಸೇನಾ ಪಡೆಯನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ.
Follow us on Social media