ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ 1 ಲಕ್ಷ ಕೋಟಿ ರೂಪಾಯಿಗಳ ಕೃಷಿ ಮೂಲ ಸೌಕರ್ಯ ನಿಧಿ ಯೋಜನೆಯನ್ನು ಉದ್ಘಾಟಿಸಿದರು. ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ಕೃಷಿ-ಉದ್ಯಮಿಗಳು, ಕೃಷಿ-ತಂತ್ರಜ್ಞಾನಿಗಳು, ರೈತ ಗುಂಪುಗಳಿಗೆ ಸಹಾಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಮತ್ತು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಏನಿದು ಹೊಸ ಕೃಷಿ ಮೂಲ ಸೌಕರ್ಯ ನಿಧಿ?: 2029ರವರೆಗೆ 10 ವರ್ಷಗಳ ಕಾಲಾವಧಿಯನ್ನು ಇದು ಹೊಂದಿರುತ್ತದೆ. ರೈತರ ಬೆಳೆಯ ಸುಗ್ಗಿಯ ನಂತರ ಕೃಷಿ ಮೂಲಸೌಕರ್ಯಗಳ ನಿರ್ವಹಣೆಗೆ, ಸಮುದಾಯ ಬೆಳೆ ಸಂಪತ್ತುಗಳಿಗೆ, ಕೃಷಿ ಆಸ್ತಿಗಳನ್ನು ಪೋಷಿಸಲು ಆರ್ಥಿಕ ಬೆಂಬಲವಾಗಿ ಮತ್ತು ಬಡ್ಡಿ ರೂಪದಲ್ಲಿ ಹೂಡಿಕೆ ಮಾಡಲು ಸರ್ಕಾರದಿಂದ ಮಧ್ಯಮದಿಂದ ದೀರ್ಘಾವಧಿಯವರೆಗೆ ಸಾಲದ ಹಣಕಾಸು ನೆರವು ನೀಡುವ ಯೋಜನೆಯಾಗಿದೆ.
ಇದರಡಿ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಹಲವು ಸಂಸ್ಥೆಗಳ ಮೂಲಕ ಸಾಲವಾಗಿ ಪ್ರಾಥಮಿಕ ಕೃಷಿ-ಕ್ರೆಡಿಟ್ ಸೊಸೈಟಿಗಳು, ರೈತ ಗುಂಪುಗಳು, ರೈತ ಉತ್ಪನ್ನ ಸಂಘಗಳು, ಕೃಷಿ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು, ಕೃಷಿ-ತಾಂತ್ರಿಕ ಸಂಸ್ಥೆಗಳಿಗೆ ನೀಡಲಾಗುತ್ತದೆ. ಇದಕ್ಕಾಗಿ ಈಗಾಗಲೇ 11 ಸಾರ್ವಜನಿಕ ವಲಯ ಬ್ಯಾಂಕ್ ಗಳು ಕೃಷಿ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿವೆ.
ಕೋವಿಡ್-19 ಆರ್ಥಿಕ ಸಂಕಷ್ಟದಿಂದ ಹೊರಬರಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 20 ಲಕ್ಷ ಸಾವಿರ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ನ ಭಾಗವಾಗಿದೆ. ಈ ಕೃಷಿ ಮೂಲಸೌಕರ್ಯ ನಿಧಿಯ ಮೂಲಕ ರೈತರು ಬೆಳೆಗಳನ್ನು ಬೆಳೆದ ನಂತರ ಅವುಗಳ ಸಂಗ್ರಹಕ್ಕೆ, ಮಾರಾಟಕ್ಕೆ ಅನುಕೂಲವಾಗುವ ಆಧುನಿಕ ಕೃಷಿ ಉಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಿದೆ. ಇದರಿಂದ ಕಡಿಮೆ ಬೆಲೆಯಿರುವಾಗ ಬೇಗನೆ ಹಾಳಾಗದಿರುವ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಅಧಿಕ ಬೆಲೆ ಇರುವ ಸಂದರ್ಭದಲ್ಲಿ ಮಾರಾಟ ಮಾಡಿ ಅಧಿಕ ಬೆಲೆ ಪಡೆಯಬಹುದು.
ಸಾಲಗಳನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರತಿವರ್ಷ 10 ಸಾವಿರ ಕೋಟಿ ರೂಪಾಯಿಗಳಂತೆ ಬಿಡುಗಡೆ ಮಾಡಲಾಗುತ್ತದೆ. 6 ತಿಂಗಳಿನಿಂದ 2 ವರ್ಷಗಳವರೆಗೆ ರೈತರಿಗೆ ಕೊಟ್ಟ ಸಾಲದ ಮರುಪಾವತಿಗೆ ಸಮಯವಿರುತ್ತದೆ. ಕ್ರೆಡಿಟ್ ಖಾತ್ರಿ ಸೌಲಭ್ಯವನ್ನೂ ಕ್ರೆಡಿಟ್ ಖಾತ್ರಿ ನಿಧಿ ಟ್ರಸ್ಟ್ ಮೂಲಕ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ 2 ಕೋಟಿಯವರೆಗಿನ ಸಾಲಕ್ಕೆ ನೀಡಲಾಗುತ್ತದೆ.
ಇನ್ನು, ಎಂ ಕಿಸಾನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಎಂಟೂವರೆ ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 17 ಸಾವಿರ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದರು.
2018ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯ 6ನೇ ಕಂತಿನ ಭಾಗವನ್ನು ಇಂದು ಪ್ರಧಾನಿ ಮೋದಿಯವರು ದೇಶದ ರೈತರ ಖಾತೆಗಳಿಗೆ ವರ್ಗಾಯಿಸಿದ್ದಾರೆ. 2018ರ ಡಿಸೆಂಬರ್ ನಲ್ಲಿ ಆರಂಭವಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ 9 ಕೋಟಿ ರೈತರಿಗೆ ಆರ್ಥಿಕ ಸಹಾಯವನ್ನು ಮಾಡುವ ಉದ್ದೇಶದಿಂದ 75 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ನೇರವಾಗಿ ವರ್ಗಾಯಿಸುವುದಾಗಿದೆ.
ನಿಜವಾದ ರೈತ ಫಲಾನುಭವಿಗಳಿಗೆ ಸರ್ಕಾರದ ಈ ನಗದು ಲಾಭ ಸಿಗಲು ಮತ್ತು ಯಾವುದೇ ರೀತಿಯಲ್ಲಿ ಸೋರಿಕೆ ತಡೆಗಟ್ಟಲು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿರುವ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕದ ಈ ಸಮಯದಲ್ಲಿ ಯೋಜನೆಯು ರೈತರಿಗೆ ಸಹಕಾರಿಯಾಗಲಿದೆ.
Follow us on Social media