ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಸಂಪುಟ ಸಭೆಯಲ್ಲಿ ಹೊಸ ಶಿಕ್ಷಣ ನೀತಿ (ರಾಷ್ಟ್ರೀಯ ಶಿಕ್ಷಣ ನೀತಿ -ಎನ್‌ಇಪಿ) ಜಾರಿಗೆ ತೀರ್ಮಾನಿಸಲಾಗಿದೆ. ಹೀಗಾಗಿ ಪ್ರಸ್ತುತ ಇರುವ 10+2 ಶಿಕ್ಷಣ ವ್ಯವಸ್ಥೆಯ ಬದಲಾಗಿ 5+3+3+4 ಮಾದರಿಯಾಗಿ ಬದಲಾವಣೆಯಾಗಲಿದೆ.
28 ವರ್ಷದ ಬಳಿಕ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲು ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಾನವ ಸಂಪನ್ಮೂಲ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯ ಎಂದು ಬದಲಾವಣೆ ಮಾಡಲಾಗಿದೆ.
2015ರಿಂದ ಎನ್‌ಇಪಿ ಜಾರಿ ಸಂಬಂಧ ಚರ್ಚೆ ನಡೆಯುತ್ತಿತ್ತು. ಆದರೆ ಇದೀಗ ಹೊಸ ಶಿಕ್ಷಣ ನೀತಿ ಜಾರಿಗೆ ತೀರ್ಮಾನಿಸಲಾಗಿದೆ. ಹೀಗಾಗಿ ಇನ್ನು ಮುಂದೆ 10+2 ಶಿಕ್ಷಣ ವ್ಯವಸ್ಥೆ ಇರುವುದಿಲ್ಲ. ಇದನ್ನು 5+3+3+4 ರಂತೆ ವಿಂಗಡನೆ ಮಾಡಲಾಗಿದೆ
5ನೇ ತರಗತಿಯವರೆಗೆ ಮಾತೃಭಾಷೆ/ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಇದನ್ನು 8 ನೇ ತರಗತಿ ವರೆಗೆ ಮುಂದುವರಿಸಬಹುದಾಗಿದೆ.
ಎಲ್ಲಾ ಉನ್ನತ ಕೋರ್ಸ್ ಗಳಿಗೆ ದೇಶದಾದ್ಯಂತ ಒಂದೇ ಸಾಮಾನ್ಯ ಪರೀಕ್ಷೆ ಇರಲಿದೆ ಆದರೆ ಇದು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ. ಈ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸುತ್ತದೆ.
5+3+3+4 :
ಶಾಲೆಯ ಮೊದಲ ಐದು ವರ್ಷಗಳು ಅಡಿಪಾಯ ಹಂತ, 3 ರಿಂದ 5 ನೇ ತರಗತಿಯವರೆಗಿನ ಮೂರು ವರ್ಷಗಳನ್ನು ಪೂರ್ವಸಿದ್ಧತಾ ಹಂತವಾಗಿ ವಿಂಗಡಿಸಲಾಗಿದೆ. ನಂತರ ಮೂರು ವರ್ಷಗಳು ಅಂದರೆ 6,7,ಮತ್ತು ೮ನೇ ತರಗತಿಯನ್ನು ಮಾಧ್ಯಮಿಕ ಹಂತ ಎಂದು ಕರೆಯಲಾಗುತ್ತದೆ.
9-12ನೇ ತರಗತಿವರೆಗೆ ಪ್ರೌಢ ಶಿಕ್ಷಣ ಹಂತ ಎಂದು ಕರೆಯಲಾಗುತ್ತದೆ. ಈ ನಾಲ್ಕು ವರ್ಷಗಳಲ್ಲಿ, ವಿದ್ಯಾರ್ಥಿಗಳು ತಾವು ಬಯಸುವ ಯಾವುದೇ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು.
ಎಂಫೀಲ್ ಪದವಿಯನ್ನು ರದ್ದು ಮಾಡಲಾಗಿದ್ದು ಮೂರು ವರ್ಷದ ಪದವಿಯನ್ನು ನಾಲ್ಕು ವರ್ಷಕ್ಕೆ ಏರಿಕೆ ಮಾಡಲಾಗುವುದು.. 6ರಿಂದ 14 ವರ್ಷದ ವರೆಗೆ ಇರುವ ಕಡ್ಡಾಯ ಶಿಕ್ಷಣದ ಹಕ್ಕನ್ನು 3ರಿಂದ 18 ವರ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.
Follow us on Social media