ಮಂಗಳೂರು: ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಲು 5 ಲಕ್ಷ ರೂ. ಪರಿಹಾರ ನೀಡಲಾಗುವುದು. ತಾತ್ಕಾಲಿಕ ಪರಿಹಾರವಾಗಿ ಒಂದು ಕುಟುಂಬಕ್ಕೆ ತಲಾ 10 ಸಾವಿರ ರೂ. ವಿತರಿಸಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳೂರಿನ ಕುಕ್ಕಾವಿನಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 275 ಮನೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಅವರಿಗೆ ಮನೆ ಕಟ್ಟಲು 5 ಲಕ್ಷ ರೂ. ನೀಡಲಾಗುವುದು. ಅಲ್ಲಿಯವರೆಗೂ ಮಳೆ ಕಳೆದುಕೊಂಡ ಸಂತ್ರಸ್ತರು ಹೊಸ ಮನೆ ನಿರ್ಮಿಸುವವರಿಗೆ ಪ್ರತಿ ತಿಂಗಳು 5 ಸಾವಿರ ರೂ. ಬಾಡಿಗೆ ಪಾವತಿಸಲಾಗುವುದು. ಹಾಳಾಗಿರುವ ಮನೆಗಳ ದುರಸ್ತಿಗೆ 1 ಲಕ್ಷ ರೂ. ನೀಡಲಾಗುವುದು ಎಂದು ಬಿಎಸ್ವೈ ತಿಳಿಸಿದರು.
ಸದ್ಯ ಕೃಷಿಯ ನಷ್ಟದ ಲೆಕ್ಕಾಚಾರ ನಡೆಯುತ್ತಿದೆ. ಬೆಳೆ ನಾಶಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುತ್ತೇವೆ. ಸಂತ್ರಸ್ತರಿಗೆ ಉಚಿತ ನಿವೇಶನ ನೀಡಲಾಗುವುದು. ಈಗಾಗಲೇ ಇದಕ್ಕಾಗಿ ಸರ್ಕಾರಿ ಭೂಮಿ ಗುರುತಿಸಲು ಸೂಚಿಸಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿ, ತಹಸೀಲ್ದಾರ್ಗೆ ಸೂಚಿಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.