ಬೆಂಗಳೂರು: ಲಾಕ್’ಡೌನ್ ಸಡಿಲಗೊಂಡ ಬಳಿಕ ಸಾಕಷ್ಟು ವಲಸೆ ಕಾರ್ಮಿಕರು ಹಾಗೂ ಇತರೆ ಜನರು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಹಿಂತಿರುಗಿದ್ದಾರೆಂದು ಹೇಳುತ್ತಿರುವ ಸರ್ಕಾರಕ್ಕೆ ಎಷ್ಟು ಮಂದಿ ಹಿಂತಿರುಗಿದ್ದಾರೆಂಬ ನಿರ್ದಿಷ್ಟ ಮಾಹಿತಿಯೇ ತಿಳಿದಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಸೇವಾ ಸಿಂಧು ಪೋರ್ಟಲ್ ನಲ್ಲಿಯೂ ನಿರ್ದಿಷ್ಟವಾಗಿ ಎಷ್ಟು ಜನರು ಹಿಂದಿರುಗಿದ್ದಾರೆಂಬ ಖಚಿತ ಮಾಹಿತಿಗಳಿಲ್ಲ. ಸೇವಾಸಿಂಧು ಆ್ಯಪ್ ಮೂಲಕ ತಮ್ಮ ಹೆಸರುಗಳನ್ನು ದಾಖಲಿಸಿಕೊಳ್ಳದೆಯೇ ಸಾಕಷ್ಟು ಜನರು ರಾಜ್ಯಕ್ಕೆ ಆಗಮಿಸುತ್ತಿದ್ದು, ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಲಕ್ಷಣವಿಲ್ಲದ ಜನರು ವೈರಸ್ನ್ನು ಹೊತ್ತು ತಂದು ಇಲ್ಲಿ ಹಬ್ಬಿಸುತ್ತಿದ್ದಾರೆ. ಲಾಕ್ಡೌನ್ ತೆರವುಗೊಂಡ ಬಳಿಕ ಈ ಬಗ್ಗೆ ಗಮನಹರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜು.10ರವರೆಗೂ ಸೇವಾ ಸಿಂಧು ಆ್ಯಪ್ ನಲ್ಲಿರುವ ಮಾಹಿತಿ ಪ್ರಕಾರ ಈ ವರೆಗೂ ರಾಜ್ಯಕ್ಕೆ 4,61,389 ಮರಳಿದ್ದು, 9,96,332 ಮಂದಿ ರಾಜ್ಯದಿಂದ ಬೇರೆ ರಾಜ್ಯಗಳಿಗೆ ಹೋಗಿದ್ದಾರೆಂದು ತಿಳಿದುಬಂದಿದೆ. ಆದರೆ, ನಿಜವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಬಂದಿದ್ದಾರೆಂಬುದನ್ನು ಸ್ವತಃ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡ ಬಳಿಕವೂ ರಾಜ್ಯಕ್ಕೆ ಬರುವ ಹಾಗೂ ಹೋಗುವ ಜನರ ನಿಜವಾದ ಸಂಖ್ಯೆ ತಿಳಿಯುವುದಿಲ್ಲ. ಟೋಲ್ ಬೂತ್ ಹಾಗೂ ಬೈಪಾಸ್ ಗಳಿಂದ ರಸ್ತೆಗಳಿಂದ ಬಂದಿರುವ ಜನರು ಸಾಕಷ್ಟು ಜನರಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವಿವರವಾದ ಮಾಹಿತಿ ಲಭ್ಯವಾಗಿಲ್ಲ.
ಪೋರ್ಟಲ್ ನಲ್ಲಿ ದಾಖಲು ಮಾಡಿಕೊಳ್ಳುವಂತೆ ಸರ್ಕಾರ ಕೇವಲ ಸಲಹೆಗಳನ್ನಷ್ಟೇ ನೀಡಿದೆ. ಕಡ್ಡಾಯ ಮಾಡಿಲ್ಲ. ಹೆಸರುಗಳನ್ನು ದಾಖಲಿಸಿಕೊಂಡರೂ ಕೂಡ ಕೆಲವರು ಬಸ್ ಹಾಗೂ ರೈಲುಗಳಲ್ಲಿ ಪ್ರಯಾಣಿಸದ ಸಾಕಷ್ಟು ಘಟನೆಗಳಿವೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯಕ್ಕೆ ಬರುವ ಹಾಗೂ ಹೋಗುವ ಜನರ ಮಾಹಿತಿಯನ್ನು ಪೋರ್ಟಲ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಕಬೇಕು. ಆದರೆ, ಈ ಕೆಲಸಗಳು ಆಗುತ್ತಿಲ್ಲ. ಹೆಸರು ದಾಖಲು ಮಾಡಿಕೊಳ್ಳದೇ ಹೋದರೆ ಏನೂ ಮಾಡಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಇದು ಅಗತ್ಯವಿಲ್ಲ. ಆದರೆ, ರಾಜ್ಯಕ್ಕೆ ಅಗತ್ಯವಿದೆ. ಹೆಸರುಗಳನ್ನು ದಾಖಲಿಸಿಕೊಳ್ಳದೆ ವಿಮಾನ ಹಾಗೂ ರೈಲುಗಳಲ್ಲಿ ಬರುತ್ತಿರುವವರನ್ನು ರಾಜ್ಯ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ. ಇದೀಗ ರಾಜ್ಯಕ್ಕೆ ಬರುವ ಜನರಿಗೆ ಐಡಿ ನೀಡಲು ಚಿಂತನೆ ನಡೆಸಲಾಗುತ್ತಿದ್ದು, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
Follow us on Social media