ಉಡುಪಿ: ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಕಾರನ್ನು ಮುಂಗಡ ಹಣ ನೀಡಿ ಖರೀದಿಸಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ತಂಡವನ್ನು ಬ್ರಹ್ಮಾವರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ತಲಪಾಡಿ ನಿವಾಸಿ ಅಬ್ದುಲ್ಲ ಅಬ್ಬಾಸ್(33), ವಿಟ್ಲ ಕೇಪು ಗ್ರಾಮ ನಿವಾಸಿ ಮಹಮ್ಮದ್ ಸಫಾನ್(22) ಬಂಧಿತರು. ಆರೋಪಿ ಅಬ್ದುಲ್ಲ ಅಬ್ಬಾಸ್ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಬಜ್ಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಜಾಲದ ಪ್ರಮುಖ ಆರೋಪಿ ಇಬ್ರಾಹಿಂ ಮಂಗಳೂರು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ವಂಚನೆ ಹೇಗೆ ?: ಮಾಲೀಕರು ಲೀಸ್‌ಗೆ ಕೊಟ್ಟ ಮತ್ತು ಒಎಲ್‌ಎಕ್ಸ್ ಆನ್‌ಲೈನ್‌ನಲ್ಲಿ ಮಾರಾಟಕ್ಕಿರುವ ಕಾರುಗಳನ್ನು ಆರೋಪಿಗಳು ನಮಗೆ ಬೇಕು ಎಂದು ಮುಂಗಡ ಹಣ ನೀಡಿ ಖರೀದಿಸುತ್ತಿದ್ದರು. ಅಲ್ಲದೆ ಅವರನ್ನು ನಂಬಿಸಲು ಕರಾರು ಪತ್ರ ಮಾಡಿಕೊಳ್ಳುತ್ತಿದ್ದರು. ಬಳಿಕ ಕಾರನ್ನು ಪಡೆದು ದೂರದ ಊರಿಗೆ ತೆರಳಿ ಕಾರು ಖರೀದಿದಾರರಿಗೆ ತಮ್ಮದೇ ಕಾರು ಎಂದು ನಂಬಿಸುತ್ತಿದ್ದರು. ಆರ್‌ಸಿಯಲ್ಲಿ ಹೆಸರು ಬದಲಾವಣೆ ಮಾಡಲು ಬಾಕಿ ಇದೆ ಎಂದು ಮುಂಗಡ ಹಣ ಪಡೆದುಕೊಂಡು ಕಾರು ನೀಡಿ ವಂಚಿಸುತ್ತಿದ್ದರು. ಈ ಬಗ್ಗೆ ಕರ್ಜೆ ಕುರ್ಪಾಡಿಯ ಸುನೀಲ್ ಎಂಬುವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬ್ರಹ್ಮಾವರ ಎಸ್‌ಐ ರಾಘವೇಂದ್ರ ಸಿ. ನೇತೃತ್ವದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಎಎಸ್‌ಐ ಸಾಂತಪ್ಪ, ಹೆಡ್‌ಕಾನ್‌ಸ್ಟೆಬಲ್‌ಗಳಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ ಕಾರ್ಕಡ, ಪ್ರವೀಣ ಶೆಟ್ಟಿಗಾರ್, ಪ್ರದೀಪ್ ನಾಯಕ್, ಕಾನ್‌ಸ್ಟೆಬಲ್ ದಿಲೀಪ್ ಕುಮಾರ್, ಎಸ್‌ಪಿ ಕಚೇರಿ ಸಿಬ್ಬಂದಿ ಶಿವಾನಂದ್ ಪಾಲ್ಗೊಂಡಿದ್ದರು.
39 ಲಕ್ಷ ರೂ. ಮೌಲ್ಯದ ಕಾರು ವಶ: ಆರೋಪಿಗಳು ಬಳ್ಳಾರಿಯಲ್ಲಿ ಶಿವಕುಮಾರ ಎಂಬುವರಿಗೆ ಮಾರಾಟ ಮಾಡಿರುವ 5 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ, 15 ಲಕ್ಷ ರೂ. ಮೌಲ್ಯದ ಮಹೀಂದ್ರ ಎಕ್ಸ್‌ಯೂವಿ, 4 ಲಕ್ಷ ರೂ. ಮೌಲ್ಯದ ಐಟ್ವೆಂಟಿ ಸ್ಫೋರ್ಟ್ಸ್, 7 ಲಕ್ಷ ರೂ. ಮೌಲ್ಯದ ಮಹೀಂದ್ರ ಟಿಯುವಿ, 8 ಲಕ್ಷ ರೂ. ಮೌಲ್ಯದ ಬ್ರೀಜಾ ಸೇರಿದಂತೆ ಒಟ್ಟು 39 ಲಕ್ಷ ರೂ. ಮೌಲ್ಯದ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
Follow us on Social media