ಹುಬ್ಬಳ್ಳಿ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ನೀಡಿದ್ದಾನೆಂಬ ಆರೋಪ ಮೇಲೆ ವ್ಯಕ್ತಿಯೋರ್ವನನ್ನು ಹುಬ್ಬಳ್ಳಿ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
ಸೋಮು ಅವರಾಧಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ. ನವನಗರದ ಚರ್ಚ್ ನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.
ಕ್ರಿಶ್ಚಿಯನ್ ಆಗಿ ಮತಾಂತರಗೊಂಡ ಬಳಿಕ ಸಾಕಷ್ಟು ಹಣ ಗಳಿಸಿರುವುದಾಗಿ ವಿಶ್ವನಾಥ್ ಬೂದೂರ್ ಎಂಬ ವ್ಯಕ್ತಿಗೆ ತಿಳಿಸಿದ್ದ ಸೋಮು, ಮತಾಂತರಗೊಳ್ಳುವಂತೆ ಪ್ರಚೋದಿಸಿದ್ದ. ಬಳಿಕ ವ್ಯಕ್ತಿಯನ್ನು ಭೈರಿದೇವರಕೊಪ್ಪದಲ್ಲಿರುವ ಪ್ರಾರ್ಥನಾ ಮಂದಿರಕ್ಕೆ ಬರುವಂತೆ ತಿಳಿಸಿದ್ದ. ಈ ಬಗ್ಗೆ ಮಾಹಿತಿ ತಿಳಿದ ಹಿಂದೂಪರ ಸಂಘಟನೆಗಳು ಚರ್ಚ್’ಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರ ನೇತೃತ್ವದಲ್ಲಿ ನವನಗರದ ಬಳಿ ರಸ್ತೆ ತಡೆ ನಡೆದಿತ್ತು.
ಇದಾದ ಬಳಿಕ ತಡರಾತ್ರಿಯ ತನಕ ನವನಗರದ ಎಪಿಎಂಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಶಾಸಕ ಅರವಿಂದ ಬೆಲ್ಲದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಾಧಿ ಬಂಧನಕ್ಕೆ ಪಟ್ಟು ಹಿಡಿಯಲಾಗಿತ್ತು.
ಪೊಲೀಸ್ ಕಮಿಷನರ್ ಲಾಬೂ ರಾಮ್ ಕಾನೂನು ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಗಿತ್ತು. ಬಳಿಕ ಸೋಮು ಅವರಾಧಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
Follow us on Social media