Breaking News

ಹಳ್ಳಿಹಕ್ಕಿ ಆಯ್ತು ಈಗ “ಬಾಂಬೆ ಡೇಸ್” ಕೃತಿ: ಆಪರೇಷನ್ ಕಮಲವನ್ನು ಬಿಚ್ಚಿಡಲಿದೆಯೇ ಎಚ್.ವಿಶ್ವನಾಥ್ ಪುಸ್ತಕ?

ಬೆಂಗಳೂರು: ಮೇಲ್ಮನೆ ಸ್ಥಾನದಿಂದ ವಂಚಿತರಾಗಿ ಸುಮಾರು ಹತ್ತು ದಿನಗಳವರೆಗೆ ಮಗುಂ ಆಗಿದ್ದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಈಗ ಮೌನ ಮುರಿದಿದ್ದಾರೆ. ಹೊಸ ಪುಸ್ತಕವೊಂದನ್ನು ಬರೆಯುವ ಮೂಲಕ ಅಕ್ಷರಗಳಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ತಿರುಗೇಟು ನೀಡಲು ವಿಶ್ವನಾಥ್ ಸಜ್ಜಾಗಿದ್ದಾರೆಯೇ? ಎನ್ನುವ ಕುತೂಹಲ ಉಂಟಾಗಿದೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸವನ್ನು ಸ್ವತಃ ವಿಶ್ವನಾಥ್ ಮಾಡಲಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ “ಹಳ್ಳಿಹಕ್ಕಿ” ಪುಸ್ತಕವನ್ನು ಹೊರತಂದಿದ್ದ ಇವರು ಹಲವು ನಾಯಕರ ಬಣ್ಣ ಬಯಲು ಮಾಡಿದ್ದರು. ಇದೀಗ ” ಬಾಂಬೇ ಡೇಸ್” ಎನ್ನುವ ಪುಸ್ತಕ ಹೊರತರಲು ಸಜ್ಜಾಗಿದ್ದಾರೆ. ಈ ಪುಸ್ತಕದ ಹುಟ್ಟು ಇವತ್ತು ನಿನ್ನೆಯದಲ್ಲ. ಇದಕ್ಕಾಗಿ ವಿಶ್ವನಾಥ್ ಮುಂಬೈನಲ್ಲಿಯೇ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದರು. ಅಂದ್ಹಾಗೆ “ಬಾಂಬೇ ಡೇಸ್” ಇವರ ಎಂಟನೆಯ ಪುಸ್ತಕ. ಪುಸ್ತಕದ ಕುರಿತು ವಿಶ್ವನಾಥ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಮೈತ್ರಿ ಸರ್ಕಾರದ ಪತನ ಮತ್ತು ಬಿಜೆಪಿ ಸರ್ಕಾರದ ರಚನೆಯ ಒಳಸುಳಿಗಳ ಹೂರಣ “ಬಾಂಬೇ ಡೇಸ್” ಎಂದು ಹೇಳಿದರು.

ಪುಸ್ತಕದ ಬಗ್ಗೆ ಹೇಳಿದ್ದಿಷ್ಟು:
ಲೋಕಕ್ಕೆ ನಾವು ಕಳಂಕಿತರು ಎನ್ನುವುದು ಬಿಂಬಿತವಾಗಿದೆ. ದುಡ್ಡು ತೆಗೆದುಕೊಂಡು ಹೋದರು‌. ಮತ್ತಿನ್ನೇನೋ ಎನ್ನುವುದೆಲ್ಲ ಬಿಂಬಿತವಾಗಿದೆ. ಮಾಧ್ಯಮಗಳು ಇನ್ನೇನೋ ವರದಿ ಮಾಡಿದವು. ನಮ್ಮ ಮೇಲಿರುವ ದೋಷಾರೋಪಣೆಯನ್ನು ತೊಡೆದು ಹಾಕಬೇಕು. ನಾಯಕನ್ಯಾರು, ಖಳ ನಾಯಕನ್ಯಾರು ? ಎಂಬುದನ್ನು ಪುಸ್ತಕವೇ ಹೇಳಲಿದೆ. 17 ಶಾಸಕರ ಪಾತ್ರಗಳೇನು? ಪುಸ್ತಕದಲ್ಲಿನ ಪಾತ್ರಗಳು ಎಲ್ಲರಿಗೂ ಗೊತ್ತಿರುವ ಪಾತ್ರಗಳೇ. ಪಾತ್ರಗಳ ಒಳಸುಳಿಯನ್ನು ಬಿಚ್ಚಿಡುತ್ತೇನೆ. ಪಾತ್ರಧಾರಿಗಳು ಸೂತ್ರಧಾರಿಗಳು ಸುಳಿಗಳೇ ಬೇರೆಯಿವೆ. ಸುಖಾಂತ್ಯವೋ ದುಃಖಾಂತ್ಯವೋ ನನಗೆ ಗೊತ್ತಿಲ್ಲ‌. ಸಮಾಜಕ್ಕೆ ಇದನ್ನು ಬಿಡುತ್ತೇನೆ. 2006ರಲ್ಲಿ ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಇಬ್ಬರು ಧರಂಸಿಂಗ್ ಸರ್ಕಾರವನ್ನು ಪತನಗೊಳಿಸಿದ್ದರು. ಅದನ್ನು ಮಾಧ್ಯಮಗಳು ಕ್ಷಿಪ್ರಕ್ರಾಂತಿ ಎಂದವು. ಆದರೀಗ ನಾವು‌ ಮಾಡಿದ್ದನ್ನು ದುಡ್ಡು ..ಏನೇನೋ …ಎಂದರು. ಇದನ್ನು ರವಿಬೆಳಗೆರೆ ತಮ್ಮ ಪುಸ್ತಕದಲ್ಲಿ 70 ಪುಟಗಳಲ್ಲಿ ಅಂದಿನ ಧರಂಸಿಂಗ್ ಸರ್ಕಾರದ ಪತನವನ್ನು ಕ್ಷಿಪ್ರಕ್ರಾಂತಿ ಹೆಸರು ಹೇಗೆ ಬಂದಿತು ಎಂದು ವಿವರಿಸಿದ್ದಾರೆ. ಈಗ ಆಗಿದ್ದು ಅಂತಹದ್ದೇ ಕ್ರಾಂತಿ. ಅಸಮಾಧಾನ, ಅವಮಾನಗಳು ಹೀಗೆಲ್ಲಾ ಆಗಿ 17 ಜನರಿಂದ ಮೈತ್ರಿ ಸರ್ಕಾರ ಪತನವಾಯಿತು‌. ಆನಂತರ ಬಿಜೆಪಿ ಸರ್ಕಾರ ಬಂತು.

ಮೂಲಭೂತವಾಗಿ ನಾನೊಬ್ಬ ಬರಹಗಾರ. ನನ್ನ ಪುಸ್ತಕಗಳೆಲ್ಲ ಕಥೆ, ಕಾದಂಬರಿಗಳಲ್ಲ. ದೇಶ, ವಿದೇಶದ ರಾಜಕಾರಣವನ್ನು ಓದಿದವನು ನೋಡಿದವನು ನಮೂದು ಮಾಡಿದವನು. ನಾನೊಬ್ಬ ರಾಜಕಾರಣಿಯಾಗಿ ವಸ್ತುಸ್ಥಿತಿ ಬರೆಯುತ್ತಿದ್ದೇನೆ. ಮೈತ್ರಿ ಸರ್ಕಾರ ಪತನವಾಗಿದ್ದು ಹೇಗೆ ಎನ್ನುವುದನ್ನು ವಿವರಿಸುತ್ತೇನೆ. ಇದೊಂದು ಇತಿಹಾಸವಾಗಲಿದೆ. ನನ್ನ ಪುಸ್ತಕ ಆಪರೇಷನ್ ಕಮಲವಲ್ಲ‌. ಆಪರೇಷನ್ ಕಮಲವೇ ಬೇರೆ. ಈ ಪುಸ್ತಕವೇ ಬೇರೆ. ಏಕಪಾತ್ರಾಭಿನಯವಲ್ಲ. ಹಲವಾರು ಪಾತ್ರಗಳು ಸುತ್ತುತ್ತವೆ. ಪುಸ್ತಕ ಜನಕ್ಕೆ ತಿಳಿಯಲೇಬೇಕು. ಈಗಾಗಲೇ ಬರವಣಿಗೆ ಆರಂಭವಾಗಿದೆ‌. ಹಿಂದೆಯೇ ಪುಸ್ತಕ ಶುರುವಾಗಿತ್ತು. ಬಾಂಬೆನಲ್ಲಿದ್ದಾಗ ನೋಟ್ ಮಾಡಿಕೊಂಡಿದ್ದೆ‌. ಈಗ ಅದಕ್ಕೆ ಸಾಹಿತ್ಯ ಅಕ್ಷರರೂಪ ಕೊಡುತ್ತಿದ್ದೇನೆ. ಇನ್ನು ಇಪ್ಪತ್ತು ದಿನಗಳಲ್ಲಿ ಒಂದಿಷ್ಟು ಅಧ್ಯಾಯಗಳು ಬರಲಿವೆ‌. ಮೂರು ಭಾಷೆಯಲ್ಲಿ ಈ ಪುಸ್ತಕ ದೆಹಲಿಯಲ್ಲಿ ಬಿಡುಗಡೆಯಾಗಲಿದೆ.

ಮೇಲ್ಮನೆಗೆ ಸಾಹಿತಿ ಕೋಟಾದಿಂದ ನಾಮನಿರ್ದೇಶನ ಸ್ಥಾನ ಕೇಳಿದ್ದೇನೆ. ಏನು ಮಾಡುತ್ತಾರೆಯೋ ನೋಡೋಣ….ಇಷ್ಟು ಹೇಳಿ ವಿಶ್ವನಾಥ್ ಮಾತು ಮುಗಿಸಿದರು. ವೈಯಕ್ತಿಕವಾಗಿ ಯಾರ ಹೆಸರನ್ನೂ ಹೇಳದೆ ಉಳಿದದ್ದೆಲ್ಲಾ ಕೃತಿ ಬಿಡುಗಡೆಯಾದ ಬಳಿಕ ನೀವೇ ಓದಿ ಎಂದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×