ಮಂಗಳೂರು: ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಿಂದ ಹೊರಟ ತ್ಯಾಜ್ಯ ರಾಶಿ ಪ್ರತಿ ದಿನ ಮುಂದುವರಿಯುತ್ತಲೇ ಇದೆ.
15 ಎಕರೆ ವ್ಯಾಪ್ತಿಯಲ್ಲಿ 75 ಮೀಟರ್ ಎತ್ತರದಲ್ಲಿ ಹರಿದು ಬಂದ ತ್ಯಾಜ್ಯ ಮಂದಾರ ಪ್ರದೇಶದಲ್ಲಿದ್ದ ಅಡಕೆ, ತೆಂಗಿನ ತೋಟ ಸಂಪೂರ್ಣ ಆಪೋಶನ ಪಡೆದಿದೆ. ಮಂಗಳವಾರವೂ ತ್ಯಾಜ್ಯ ಮುಂದಕ್ಕೆ ಹರಿದಿದ್ದು, ನೂರಾರು ವರ್ಷಗಳ ಹಿಂದಿನ ಬೃಹತ್ ಮರಗಳನ್ನು ನೆಲಕ್ಕೆ ದೂಡಿ ಹಾಕಿದೆ.
ಮಂದಾರ ಪ್ರದೇಶದಲ್ಲಿ ತ್ಯಾಜ್ಯ ರಾಶಿ ಬಿದ್ದ ಸ್ಥಳದಲ್ಲಿ ಆಳೆತ್ತರಕ್ಕೆ ಕೊಳಚೆ ನೀರು ಸಂಗ್ರಹಗೊಂಡಿದೆ. ರಸ್ತೆ ಬದಿ ಮೂರು ಮನೆಗಳಿದ್ದು, ಕೊಳಚೆ ನೀರು ಮನೆಯೊಳಗೆ ನುಗ್ಗುವ ಭೀತಿ ಎದುರಾಗಿದೆ. ಈ ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಆದರೆ ಸೊತ್ತುಗಳು ಒಳಗಡೆ ಇದೆ.
ಕೆಲಸ ಮಾಡಲಾಗದ ಸ್ಥಿತಿ!
ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ಸ್ಮಾರ್ಟ್‌ಸಿಟಿ ಅಧಿಕಾರಿ ಮಣಿರಾಜ್, ಮನಪಾ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ಹಾಗೂ ಕಾರ್ಯಕಾರಿ ಇಂಜಿನಿಯರ್‌ಗಳ ತಂಡ ಭೇಟಿ ನೀಡಿ ಸಂಗ್ರಹಗೊಂಡ ನೀರನ್ನು ಹರಿದು ಹೋಗುವಂತೆ ಮಾಡಲು ಪ್ರಯತ್ನಿಸಿದ್ದಾರೆೆ. ಆದರೆ ತ್ಯಾಜ್ಯ ರಾಶಿಯಲ್ಲಿ ಕೆಲಸ ಮಾಡಲಾಗದ ಸ್ಥಿತಿ ಇದೆ. ಹಾಗಾಗಿ ಹಿಟಾಚಿಗಳು ಅಲ್ಲಿಯೇ ಸ್ಥಗಿತಗೊಂಡಿವೆ.
ಮತ್ತೆ ತ್ಯಾಜ್ಯ ಸುರಿಯುವಿಕೆಗೆ ವಿರೋಧ
ತ್ಯಾಜ್ಯ ಕುಸಿತ ಸ್ಥಳದಲ್ಲಿ ಮತ್ತೆ ನಗರದ ತ್ಯಾಜ್ಯಗಳನ್ನು ತಂದು ಸುರಿದಿದ್ದಾರೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದಾಗ ಸ್ಥಳೀಯರು ಒಟ್ಟು ಸೇರಿ ಮತ್ತೆ ಇದೇ ಸ್ಥಳದಲ್ಲಿ ತ್ಯಾಜ್ಯ ತಂದು ಸುರಿಯದಂತೆ ಎಚ್ಚರಿಕೆ ನೀಡಿದ್ದಾರೆ. ಬೇರೆ ಕಡೆ ತ್ಯಾಜ್ಯ ಡಂಪ್ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬಳಿಕ ಇನ್ನೊಂದು ಭಾಗದಲ್ಲಿ ತ್ಯಾಜ್ಯ ಡಂಪ್ ಮಾಡಿದ್ದಾರೆ.
ಪಚ್ಚನಾಡಿಗೆ 40 ವರ್ಷದ ಹಿಂದೆ 2 ಲಾರಿಗಳಲ್ಲಿ ತ್ಯಾಜ್ಯ ಬರುತ್ತಿತ್ತು. ಈಗ ಪ್ರತಿ ದಿನ 450 ಟನ್ ತ್ಯಾಜ್ಯ ಡಂಪ್ ಮಾಡಲಾಗುತ್ತಿದೆ. ಮಹಾನಗರಪಾಲಿಕೆ ಅವೈಜ್ಞಾನಿಕವಾಗಿ ಡಂಪ್ ಮಾಡಿರುವುದೇ ಈ ತ್ಯಾಜ್ಯ ಕುಸಿತಕ್ಕೆ ಕಾರಣ. ಸಂತ್ರಸ್ತರಿಗೆ ಗರಿಷ್ಠ ಮೊತ್ತದಲ್ಲಿ ಪರಿಹಾರ ನೀಡಬೇಕು.
-ರಾಜೇಶ್ ಭಟ್ ಮಂದಾರ, ಸ್ಥಳೀಯ ನಿವಾಸಿ