ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹಬ್ಬ, ಆದರೆ ಕೊರೋನಾದಿಂದಾಗಿ ಈ ವರ್ಷ ಯಾವ ಹಬ್ಬವೂ ಕಳೆಗಟ್ಟುತ್ತಿಲ್ಲ, ಸರಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಿಬಿಎಂಪಿ ನಿಷೇಧ ಹೇರಿದೆ.
ಕೋವಿಡ್ ಸೋಂಕು ಹರಡುತ್ತಿರುವುದರಿಂದ ಈ ಬಾರಿಯ ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.
ಈ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮಾರಂಭಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ, ಪಥ ಸಂಚಲನ, ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಇರುವುದಿಲ್ಲ. ಮುಖ್ಯಮಂತ್ರಿ ಅವರು ತುಕಡಿಗಳ ತಪಾಸಣೆ ನಡೆಸುವುದು ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಮುಖ್ಯಮಂತ್ರಿ ಅವರ ಭಾಷಣ ಮುಗಿದ ನಂತರ ನಾಡಗೀತೆ, ರೈತ ಗೀತೆ, ಎರಡು ದೇಶಭಕ್ತಿ ಗೀತೆಗಳು ಮಾತ್ರ ಇರಲಿವೆ. 75 ಮಂದಿ ಕೊರೊನಾ ವಾರಿಯರ್ಸ್, ಸೋಂಕಿನಿಂದ ಗುಣಮುಖರಾದ 25 ಮಂದಿಯನ್ನು ಆಹ್ವಾನಿಸಲಾಗಿದೆ. ಅವರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗುವುದು. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸೀಮಿತಗೊಳಿಸಿ 200 ಮಂದಿ ಮೀರದಂತೆ ಸಮಾರಂಭ ನಡೆಸಲಾಗುವುದು’ ಎಂದರು.
ಸಮಾರಂಭಕ್ಕೆ ಬರುವ ಎಲ್ಲರಿಗೂ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಲು ಕಿಯೋಸ್ಕ್ ಗಳ ವ್ಯವಸ್ಥೆ ಮಾಡಲಾಗುವುದು. ಥರ್ಮಲ್ ಸ್ಕ್ಯಾನಿಂಗ್ ಹಾಗೂ ಪಲ್ಸ್ ಆಕ್ಸಿಮೀಟರ್ ಮೂಲಕವೂ ತಪಾಸಣೆ ನಡೆಸಲಾಗುವುದು ಎಂದು ವಿವರಿಸಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧ ಸರಳವಾಗಿ ಗೌರಿ–ಗಣೇಶ ಹಬ್ಬ ಆಚರಣೆ ಮಾಡಲು ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಲಾಗಿದೆ ಎಂದು ಎನ್. ಮಂಜುನಾಥ ಪ್ರಸಾದ್ ಹೇಳಿದರು. ‘ಕರೆ, ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನೆಗೆ ಅನುಮತಿ ಇಲ್ಲ. ಮನೆಯಲ್ಲೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಇಟ್ಟು ಪೂಜಿಸಿ, ಮನೆಯಲ್ಲೇ ವಿಸರ್ಜನೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
Follow us on Social media