ಜೈಪುರ: ಬಿಜೆಪಿಗೆ ಸೇರಲು ಸಚಿನ್ ಪೈಲಟ್ ತಮಗೆ ಹಣದ ಆಮಿಷವೊಡ್ಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರಿಗೆ ಸಚಿನ್ ಪೈಲಟ್ ಲೀಗಲ್ ನೊಟೀಸ್ ಕಳುಹಿಸಿದ್ದಾರೆ.
ಶಾಸಕ ಮಾಲಿಂಗ ಮಾಧ್ಯಮಗಳಿಗೆ ತಪ್ಪು ಮತ್ತು ಸುಳ್ಳು ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಸಚಿನ್ ಪೈಲಟ್ ತಮ್ಮ ವಕೀಲರ ಮೂಲಕ ಲೀಗಲ್ ನೊಟೀಸ್ ಕಳುಹಿಸಿದ್ದಾರೆ ಎಂದು ಮೂಲಗಳಿಂದ ಖಚಿತವಾಗಿ ತಿಳಿದುಬಂದಿದೆ.
ಮೊನ್ನೆ ಸೋಮವಾರ ಜೈಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ, ನಾನು ಸಚಿನ್ ಪೈಲಟ್ ಜೊತೆ ಚರ್ಚೆ ಮಾಡಿದ್ದೆ. ಅವರು ನನ್ನಲ್ಲಿ ನಿನಗೆ ಎಷ್ಟು ಹಣ ಬೇಕು, 35 ಕೋಟಿ ರೂಪಾಯಿ ಕೊಡುತ್ತೇನೆ, ಬಿಜೆಪಿಗೆ ಸೇರಿಬಿಡು ಎಂದಿದ್ದರು. ಕಳೆದ ಡಿಸೆಂಬರ್ ನಿಂದ ಇದು ನಡೆಯುತ್ತಿದೆ. ಇದೇನು ಹೊಸತಲ್ಲ. ಆಗ ನಾನು ಇಲ್ಲ ಇದು ಸಾಧ್ಯವಿಲ್ಲ ಎಂದು ನಾನು ಸಚಿನ್ ಪೈಲಟ್ ಗೆ ಎರಡು ಮೂರು ಬಾರಿ ಹೇಳಿದೆ ಎಂದಿದ್ದರು.
ತಮ್ಮ ವಿರುದ್ಧ ಅನರ್ಹತೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಕಾನೂನಾತ್ಮಕವಾಗಿ ಹೋರಾಟಕ್ಕಿಳಿದಿರುವ ಸಚಿನ್ ಪೈಲಟ್ ಮಾಲಿಂಗ ಅವರ ಆರೋಪವನ್ನು ನಿರಾಕರಿಸಿದ್ದು, ಆಧಾರರಹಿತ ಮತ್ತು ಗೊಂದಲದ ಆರೋಪ ನನ್ನ ಮೇಲೆ ಮಾಡುತ್ತಿದ್ದಾರೆ, ಅವರ ವಿರುದ್ಧ ಕಾನೂನಾತ್ಮಕ ಹೋರಾಟಕ್ಕಿಳಿಯುವುದಾಗಿ ತಿಳಿಸಿದ್ದರು.
Follow us on Social media