ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸ್ವಯಂಪ್ರೇರಿತರಾಗಿ ರಾಜಿನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆಯೇ ಹೊರತು ಅವರ ಮೇಲೆ ಪಕ್ಷದಿಂದ ಯಾವ ಒತ್ತಡವೂ ಇರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರಿಂದು ಸುದ್ದಿಗಾರರ ಜೊತೆ ಮಾತನಾಡಿದರು. ‘ಇಂದು ಸಂಜೆ ಈಶ್ವರಪ್ಪ ನನಗೆ ದೂರವಾಣಿ ಕರೆ ಮಾಡಿದ್ದರು. ಆ ವೇಳೆ ರಾಜಿನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಒಂದು ವೇಳೆ ರಾಜೀನಾಮೆ ಕೊಡದೆ ಇದ್ದರೆ ಪಕ್ಷದಲ್ಲಿ ಇರಿಸುಮುರಿಸಾಗಬಹುದು ಹೀಗಾಗಿ ನನ್ನ ಮೇಲೆ ನನಗೆ ನಂಬಿಕೆ ಇದೆ. ಸಂಪೂರ್ಣ ತನಿಖೆ ಬಳಿಕ ಉತ್ತರ ಕೊಡುತ್ತೇನೆ ಅಂತಾ ಈಶ್ವರಪ್ಪ ಹೇಳಿದ್ದಾರೆ’ ಎಂದು ಮುಖ್ಯಮಂತ್ರಿ ಇಳಿಸಿದ್ದಾರೆ.
ಅವರ ರಾಜಿನಾಮೆಗೆ ಹೈಕಮಾಂಡ್ ಒತ್ತಡ ಇರಲಿಲ್ಲ. ಅವರು ಕೇವಲ ಮಾಹಿತಿ ಪಡೆದುಕೊಂಡಿದ್ದರು. ಈಶ್ವರಪ್ಪ ಸ್ವಯಂ ಪ್ರೇರಿತರಾಗಿ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ನವರಿಗೆ ನೈತಿಕತೆಯ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಹೇಳಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಇಂದು ಸಂಜೆ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಅವರು, ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
Follow us on Social media