ಬೆಂಗಳೂರು: ಕೊರೋನಾ ಸೋಂಕಿತರ ಪರೀಕ್ಷೆಗೆ ಕೇರಳ ಮಾದರಿ ಅನುಸರಿಸುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೇರಳದಲ್ಲಿ ಈ ಹಿಂದೆ ವಿದೇಶಗಳಿಂದ ಬಂದವರ ಸಂಖ್ಯೆ ಹೆಚ್ಚಾಗಿತ್ತು. ಆದರೂ ಅಲ್ಲಿ ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರಿಂದ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ.ಯಾಕೆ ಹೀಗಾಗುತ್ತಿದೆ ಎಂದು ಅಧ್ಯಯನ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ.
ಸೋಂಕು ಕಂಡು ಬಂದ ಸಂದರ್ಭದಲ್ಲೇ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಈ ಕುರಿತು ನಾವು ಸಹ ಸರ್ಕಾರಕ್ಕೆ ಸಲಹೆ ನೀಡಿದ್ದೆವು. ವಿಧಾನ ಮಂಡಲ ಅಧಿವೇಶನ ಮುಂದೂಡಿ ಕೊರೊನಾ ಸೋಂಕಿನತ್ತ ಗಮನ ಹರಿಸಿ ಎಂದು ಹೇಳಿದ್ದೆವು. ಆಗ ಸರ್ಕಾರ ವಿಳಂಬ ಮಾಡಿದ್ದರಿಂದಲೇ ಪರಿಸ್ಥಿತಿ ಇಂದು ಈ ಹಂತ ತಲುಪಿದೆ ಎಂದು ಆರೋಪಿಸಿದ್ದಾರೆ.
ಮೈಸೂರಿನ ಜ್ಯುಬಿಲಿಯೆಂಟ್ ಕಾರ್ಖಾನೆಯಲ್ಲಿ ಚೀನಾದ ಕಂಟೈನರ್ ಗಳಿಂದ ಸೋಂಕು ಬಂದಿದೆ ಎಂದು ಹೇಳಲಾಗಿತ್ತು, ಆದರೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಅಲ್ಲಿ ಕ್ವಾರಂಟೈನ್ ಸರಿಯಾಗಿ ಪಾಲಿಸುತ್ತಿದ್ದರೆ ಇಷ್ಟು ವೇಗವಾಗಿ ಸೋಂಕು ಹರಡುತ್ತಿರಲಿಲ್ಲ ಎಂದಿದ್ದಾರೆ.
Follow us on Social media