ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ರಾಜಕೀಯಗೊಳಿಸಬೇಡಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಮರಾಠಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯನ್ನು ಮುಂಬೈ ಪೊಲೀಸರು ಸರಿಯಾದ ದಿಕ್ಕಿನಲ್ಲಿ ನಡೆಸುತ್ತಿದ್ದಾರೆ. ಅವರಿಗೆ ತನಿಖೆ ಮಾಡಲು ಸಾಕಷ್ಟು ಸಮಯ ಕೊಡಬೇಕು. ಸಮಯ ನೀಡಿದ ಬಳಿಕವೂ ಪೊಲೀಸರು ತನಿಖೆ ಮಾಡದಿದ್ದರೆ ನಂತರ ಟೀಕೆ ಮಾಡಿ ಒತ್ತಡ ಹೇರಿ, ಅದು ಬಿಟ್ಟು ಈಗಲೇ ಸುಖಾಸುಮ್ಮನೆ ಟೀಕಿಸುವುದು ಸರಿಯಲ್ಲ ಎಂದಿದ್ದಾರೆ.
ಈ ವಿಷಯದಲ್ಲಿ ವಿರೋಧ ಪಕ್ಷಗಳ ರಾಜಕೀಯ ಕುತಂತ್ರಗಳನ್ನು ನಂಬಬೇಡಿ ಎಂದು ಸುಶಾಂತ್ ಸಿಂಗ್ ಅಭಿಮಾನಿಗಳನ್ನು ಸಹ ಸಿಎಂ ಕೇಳಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಯಾರಲ್ಲಿಯಾದರೂ ಸಾಕ್ಷಿಗಳಿದ್ದರೆ ನಮ್ಮ ಬಳಿ ತರಬಹುದು, ನಾವು ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಅದು ಬಿಟ್ಟು ಪ್ರಕರಣವನ್ನು ರಾಜಕೀಯಗೊಳಿಸಿ ಮಹಾರಾಷ್ಟ್ರ ಮತ್ತು ಬಿಹಾರ ಸರ್ಕಾರ ಮಧ್ಯೆ ಬಿಕ್ಕಟ್ಟು ಸೃಷ್ಟಿ ಮಾಡಲು ಪ್ರಯತ್ನಿಸಬೇಡಿ ಎಂದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪೊಲೀಸರಿಗೆ ವಾಸ್ತವ್ಯಕ್ಕೆ ಒಂದು ಮನೆಯನ್ನು ಕೂಡ ಕೊಟ್ಟಿರಲಿಲ್ಲ. ಈಗ ನನ್ನ ಹುಟ್ಟುಹಬ್ಬ ಸಮಯದಲ್ಲಿ ಬಿಜೆಪಿಯವರು ಪೊಲೀಸರಿಗೆ ಮನೆಗಳನ್ನು ಕೊಟ್ಟಿದ್ದಾರೆ, ಈ ಕ್ರಮಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಅಭಿಯಾನ ಮಾಡಬೇಡಿ, ಇದರಿಂದ ಅವರ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ಸಹ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನವಿ ಮಾಡಿಕೊಂಡಿದ್ದಾರೆ.
Follow us on Social media