ಸುಳ್ಯ: ಸುಳ್ಯ ತಾಲೂಕಿನಲ್ಲಿ ಮತ್ತೆ ಇಂದು ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿದೆ. ಎರಡು ದಿನಗಳ ಹಿಂದೆ ಇಲ್ಲಿ ಭೂಕಂಪನ ಸಂಭವಿಸಿತ್ತು. ಇಂದು ಮತ್ತೆ ಅದೇ ರೀತಿಯ ಅನುಭವ ಆಗಿದೆ. ಹಾಗೂ ಮೊನ್ನೆಗಿಂತ ಇಂದಿನ ಭೂಕಂಪನದ ಅನುಭವ ತೀವ್ರವಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಮಂಗಳವಾರ ಬೆಳಿಗ್ಗೆ 7.44 ರಿಂದ 7.45 ರ ಹೊತ್ತಿಗೆ ಲಘುವಾಗಿ ಭೂಮಿ ಕಂಪಿಸಿದೆ. ಭಾರೀ ವಿಚಿತ್ರ ಶಬ್ದದೊಂದಿಗೆ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ ಎನ್ನಲಾಗಿದೆ. ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಇದೇ ವೇಳೆ ಮರಗಳು ಉರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಳ್ಯ, ಸಂಪಾಜೆ, ಗೂನಡ್ಕ, ಗುತ್ತಿಗಾರು ಮತ್ತಿತರ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿರುವ ಬಗ್ಗೆ ಜನರು ತಿಳಿಸಿದ್ದಾರೆ.
10 ಕೀ.ಮಿ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನು ಭೂಕಂಪನ ವಿಪತ್ತು ನಿರ್ವಹಣಾ ದಳ ಧೃಡಪಡಿಸಬೇಕಾಗಿದೆ.
ಮಡಿಕೇರಿಯಲ್ಲೂ ಭೂಕಂಪನದ ಅನುಭವ
ಮಡಿಕೇರಿ, ನಾಪೋಕ್ಲು ಕುಕ್ಕುಂದ ಕಾಡು, ಬಲ್ಲಮಾವಟ್ಟಿ. ದಬ್ಬಡ್ಕ, ಪೆರಾಜೆ, ಕರಿಕೆ, ಭಾಗಮಂಡಲ, ಮದೆನಾಡು ಸೇರಿದಂತೆ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ. ಈ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.
Follow us on Social media