ಬೆಂಗಳೂರು: ಕೊರೊನಾ ಸೋಂಕಿತರಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಫೇಸ್‍ಬುಕ್‍ನಲ್ಲಿ ಅವಹೇಳನ ಕಾರಿಯಾಗಿ ಬರೆದಿರುವ ಕಿಡಿಗೇಡಿಗಳ ವಿರುದ್ಧ ಕೆಪಿಸಿಸಿ ಕಾನೂನು ಘಟಕದಿಂದ ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಕಾನೂನು ಘಟಕದಿಂದ ವಕೀಲ ಸೂರ್ಯ ಮುಕುಂದರಾಜ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿ ಮತ್ತೆ ಹುಟ್ಟಿ ಬರಬೇಡ, ಬಂದರೂ ಜಾತಿ ಮಾಡಬೇಡ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗೊ ನಾಲಾಯಕ್ , ಮೊಟ್ಟೇಲಿ ಮಕ್ಕಳ ಜಾತಿ ಭೇದ ಮಾಡೊ ಭಿಕಾರಿ ಹೋಗು ಎಂದು ಫೇಸ್‍ಬುಕ್‍ನಲ್ಲಿ ಬರೆದಿರುವ ಮಂಜು ಮತ್ತು ಆನಂದ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಬರಹ ಹಾಕಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸದಸ್ಯನನ್ನು ಪೊಲೀಸರು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Follow us on Social media