ಚಂಡೀಗಢ: ಸಾರ್ವಜನಿಕವಾಗಿಯೇ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡೆ ಹಾಗೂ ಟಿಕ್ ಟಾಕ್ ಸ್ಟಾರ್ ಸೋನಾಲಿ ಫೋಗಟ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದರು. ಬಳಿಕ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಸೋನಾಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಸೋನಾಲಿ ಫೋಗಟ್ ಅವರು ಜೂನ್ 5ರಂದು ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರ ಎದುರೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ನಡೆದು 12 ದಿನಗಳ ನಂತರ ಇಂದು ಸೋನಾಲಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿ ಸೋನಾಲಿಯನ್ನು ಹಿಸಾರ್ ಕೋರ್ಟ್ ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ ಪೊಲೀಸರ ಮನವಿಯನ್ನು ತಿರಸ್ಕರಿಸಿದ ಕೋರ್ಟ್, ಸೋನಾಲಿ ಫೋಗಟ್ ಗೆ ಜಾಮೀನು ನೀಡಿದೆ.
ಸೋನಾಲಿ ಫೋಗಟ್ ಅವರು ಹರಿಯಾಣದ ಹಿಸಾರ್ ನ ಮಾರುಕಟ್ಟೆ ಸಮಿತಿಯ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದರು. ನಂತರ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಚಪ್ಪಲಿಯಿಂದ ಹೊಡೆದಿರುವುದಾಗಿ ಹೇಳಿಕೆ ನೀಡಿದ್ದರು.
ಹಿಸಾರ್ ಜಿಲ್ಲೆಯ ಅಡಂಪೂರ್‌ನಿಂದ 2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಫೋಗಟ್ ಸ್ಪರ್ಧಿಸಿ ಹಿರಿಯ ಕಾಂಗ್ರೆಸ್ ಮುಖಂಡ ಕುಲದೀಪ್ ಬಿಷ್ಣೋಯ್ ವಿರುದ್ಧ ಸೋಲು ಕಂಡಿದ್ದರು.
Follow us on Social media