ಚಂಡೀಗಢ: ಬಿಜೆಪಿ ಮುಖಂಡೆ, ಟಿಕ್‍ಟಾಕ್ ಸ್ಟಾರ್ ಸೋನಾಲಿ ಫೋಗಟ್ ಅವರು ಸರ್ಕಾರಿ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಫೋಗಟ್ ಶುಕ್ರವಾರ ಹಿಸಾರ್ ನ ಬಾಲ್ಸಮಂದ್ ಮಂಡಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಿಸಾರ್ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸುಲ್ತಾನ್ ಸಿಂಗ್‍ರನ್ನು ಫೋಗಟ್ ಥಳಿಸಿದ್ದಾರೆ. ಕೆಲವು ರೈತರು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ವಿಚಾರದಲ್ಲಿ ಸಮಸ್ಯೆಗಳಿವೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಫೋಗಟ್ ಮಂಡಿಯ ಪರಿಶೀಲನೆಗೆ ಹೋಗಿದ್ದರು. ಆಗ ಸುಲ್ತಾನ್ ಸಿಂಗ್ ನಿಮ್ಮಂಥ ಸುಂದರ ಚೆಲುವೆ, ಸ್ಟಾರ್ ಬಿಸಿಲಿನಲ್ಲಿ ಹೀಗೆ ಮಂಡಿಗೆ ಬರಬಾರದು ಎಂದು ಹೇಳಿದ್ದರು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಫೋಗಟ್, ಸಿಂಗ್ ಜೊತೆ ತೀವ್ರವಾಗಿ ಮಾತುಕತೆ ನಡೆಸಿದ್ದಾರೆ. ನಂತರ ಚಪ್ಪಲಿ ತೆಗೆದುಕೊಂಡು ಥಳಿಸಿದ್ದಾರೆ. ಈ ವಿಡಿಯೋವನ್ನು ಸ್ಥಳದಲ್ಲಿದ್ದವರು ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. “ನಿಮ್ಮಂತಹ ಜನರಿಂದ ನಿಂದನೆಗಳನ್ನು ಕೇಳಲು ನಾನು ಕೆಲಸ ಮಾಡುತ್ತಿದ್ದೇನೆ? ಗೌರವಾನ್ವಿತವಾಗಿ ಬದುಕಲು ನನಗೆ ಹಕ್ಕಿಲ್ಲವೇ?” ಎಂದು ಫೋಗಟ್ ವೀಡಿಯೊದಲ್ಲಿ ಹೇಳಿದ್ದಾರೆ.
ಪರಸ್ಪರ ಪೊಲೀಸರಿಗೆ ದೂರು:
ಈ ಘಟನೆ ನಡೆದ ನಂತರ ಫೋಗಟ್ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ, ಸುಲ್ತಾನ್ ಸಿಂಗ್ ಅಸಭ್ಯವಾಗಿ ಮಾತನಾಡಿ ನನ್ನನ್ನು ಅವಮಾನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಇತ್ತ ಸುಲ್ತಾನ್ ಸಿಂಗ್ ಕೂಡ ಒಬ್ಬ ಸರ್ಕಾರಿ ಅಧಿಕಾರಿಯ ಮೇಲೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಫೋಗಟ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸುಲ್ತಾನ್ ಸಿಂಗ್ ಮತ್ತು ಫೋಗಟ್ ಇಬ್ಬರು ಪರಸ್ಪರ ದೂರು ದಾಖಲಿಸಿದ್ದಾರೆ. ನಾವು ಇಬ್ಬರ ಹೇಳಿಕೆಗಳು ಮತ್ತು ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೇವೆ. ನಂತರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೋಗಟ್ ವಿರುದ್ಧ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಕೃತ್ಯಗಳನ್ನು ಬಿಜೆಪಿ ಮುಖಂಡೆ ಮಾಡಿದ್ದಾರೆ. ಸರ್ಕಾರಿ ಕೆಲಸ ಮಾಡುವುದು ಅಪರಾಧವೇ? ಸಿಎಂ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಫೋಗಟ್ ವಿರುದ್ಧ ಕ್ರಮ ತೆಗೆದುಕೊಳ್ಳುವರೇ” ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ ವರ್ಷ ಅದಂಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಫೋಗಟ್ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್‍ನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋತಿದ್ದರು.
Follow us on Social media