ಹೈದರಾಬಾದ್: ಲಡಾಖ್’ನ ಗಾಲ್ವಾವ್ ಕಣಿವೆಯ ವೀರ ಯೋಧರ ತ್ಯಾಗ, ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆಂದು ಭಾರತೀಯ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್.ಭದೌರಿಯಾ ಅವರು ಶನಿವಾರ ಹೇಳಿದ್ದಾರೆ.
ಹೈದರಾಬಾದ್’ನ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ಭದೌರಿಯಾ ಅವರ ಸಮ್ಮುಕದಲ್ಲಿ ಸಂಯೋಜಿತ ಪದವಿ ಪರೇಡ್ ನಡೆಯಿತು. ಈ ವೇಳೆ ಮಾತನಾಡಿರುವ ಅವರು, ಯಾವುದೇ ಆಕಸ್ಮಿಕಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ನಾವು ಸಿದ್ಧರಿದ್ದೇವೆ ಎಂಬುದು ಸ್ಷಷ್ಟವಾಗಿರಬೇಕು. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸರ್ವ ಸನ್ನದ್ಧರಾಗಿದ್ದೇವೆ. ಅಲ್ಲದೆ, ವೀರ ಯೋಧರ ತ್ಯಾಗ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ಗಡಿ ರಕ್ಷಣೆಗಾಗಿ ತ್ಯಾಗ ಮಾಡಿದ ಕರ್ನಲ್ ಸಂತೋಷ್ ಬಾಬು ಮತ್ತು ಅವರ ವೀರ ಪಡೆಗೆ ನಾವೆಲ್ಲರೂ ಗೌರವ ಸಲ್ಲಿಸೋಣ. ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲೂ ಹೋರಾಡಿದ ಧೈರ್ಯಶಾಲಿಗಳ ಸೌರ್ಯ, ಭಾರತದ ಸಾರ್ವಭೌಮತ್ವವನ್ನು ಯಾವುದೇ ಹಂತಲ್ಲೂ ರಕ್ಷಿಸುವ ನಮ್ಮ ಸಂಕಲ್ಪವನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದ್ದಾರೆ.
ಚೀನಾ ಸಂಘರ್ಷ ಬೆನ್ನಲ್ಲೇ ಗಡಿಯಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಭಾರತದ ರಕ್ಷಣಾಪಡೆಗಳ ಸಾಮರ್ಥ್ಯದ ಮೇಲೆ ಯಾರೊಬ್ಬರೂ ಸಂದೇಹ ಪಡಬಾರದು ಎಂದಿದ್ದಾರೆ.
Follow us on Social media