ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಟೀಂ ಇಂಡಿಯಾ ಮಾಜಿ ದಿಗ್ಗಜ ಆಟಗಾರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಎಲ್ಲರೂ ಬಿಸಿಸಿಐ ತಂದಿರುವ ಹೊಸ ನಿಯಮಗಳ ಅನ್ವಯ ಹಿತಾಸಕ್ತಿ ಸಂಘರ್ಟದ ಆರೋಪ ಎದುರಿಸಿದ್ದರು.
ನಿವೃತ್ತ ನ್ಯಾಯಮೂರ್ತಿ ಲೊಧಾ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸಿನ ಬಳಿಕ ಸುಪ್ರೀಂ ಕೋರ್ಟ್ಸ್ ಆದೇಶದ ಮೇರೆಗೆ ಬಿಸಿಸಿಐ ತನ್ನ ನೂತನ ಸಂವಿಧಾನವನ್ನು ಜಾರಿಗೆ ತಂದಿತ್ತು. ಬಳಿಕ ಹಲವು ಮಾಜಿ ಕ್ರಿಕೆಟಿಗರಿಗೆ ಈ ಹಿತಾಸಕ್ತಿ ಸಂಘರ್ಷದ ಬಿಸಿ ಎದುರಿಸುವಂತಾಗಿತ್ತು. ಇದೀಗ ಈ ಬಿಸಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೂ ತಟ್ಟಿದೆ.
ಬಿಸಿಸಿಐ ತಂದಿರುವ ನೂತನ ಸಂವಿಧಾನದ ಅನ್ವಯ ಬಿಸಿಸಿಐ ಆಟಗಾರರು ಅಥವಾ ಬಿಸಿಸಿಐನ ಅಧಿಕಾರಿಗಳು ಸ್ವಹಿತಾಸಕ್ತಿಯೊಂದಿಗೆ ಬೇರೆ ಸಂಸ್ಥೆಗಳಲ್ಲಿ ಯಾವುದೇ ಹುದ್ದೆಗಳನ್ನು ಹೊಂದುವಂತಿಲ್ಲ. ಈ ರೀತಿ ಮಾಡಿದ್ದವರ ವಿರುದ್ಧ ಸತತವಾಗಿ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಗೌರವ ಸದಸ್ಯರಾದ ಸಂಜೀವ್ ಗುಪ್ತಾ ದೂರು ದಾಖಲಿಸುತ್ತಾ ಬಂದಿದ್ದಾರೆ. ಇದೀಗ ಕೊಹ್ಲಿ ಕೂಡ ಇಂಥದ್ದೇ ಪ್ರಮಾದ ಮಾಡಿದ್ದಾರೆ ಎಂದು ಆರೋಪಿಸಿ ಬಿಸಿಸಿಐನ ಎಥಿಕ್ಸ್ ಆಫಿಸರ್ ಜಸ್ಟಿಸ್ ಡಿಕೆ ಜೈನ್ ಅವರಿಗೆ ದೂರು ಸಲ್ಲಿಸಿದ್ದಾರೆ ಎಂದು ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ದೂರಿನಲ್ಲಿ ಹೇಳಿರುವಂತೆ ವಿರಾಟ್ ಕೊಹ್ಲಿ ಎರಡು ಹುದ್ದೆಯನ್ನು ಹೊಂದಿದ್ದಾರೆ. ಒಂದು ಟೀಮ್ ಇಂಡಿಯಾ ಆಟಗಾರನಾಗಿ ಭಾರತ ತಂಡದ ನಾಯಕತ್ವ ಪಡೆದಿರುವುದು ಮತ್ತೊಂದು ಸಹ ಆಟಗಾರರ ಜೊತೆಗಿನ ಒಪ್ಪಂದಗಳನ್ನು ನಿಭಾಯಿಸುವ ಕ್ರೀಡಾ ಮಾರ್ಕೆಟಿಂಗ್ ಸಂಸ್ಥೆಯೊಂದರ ನಿರ್ದೇಶಕನ ಹುದ್ದೆ ಅಲಂಕರಿಸಿರುವುದು. ಕೊಹ್ಲಿ, ಈ ಮೂಲಕ ಬಿಸಿಸಿಐ ಸಂವಿಧಾನದ ನಿಯಮ 38 (4)ರ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
Follow us on Social media