ಬೆಂಗಳೂರು : ಇದು ವಿದ್ಯುತ್ ದರ ಹೆಚ್ಚಿಸುವ ಸಮಯವಲ್ಲ. ಸರ್ಕಾರ ಬಡವರ ಪರ ಎಂದು ಹೇಳಿಕೊಳ್ಳುತ್ತದೆ. ಆದರೆ ಬಡವರ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯುಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಿಜೆಪಿ ಸರ್ಕಾರ ಹೇಳುವುದೇ ಒಂದು ಮಾಡುವುದು ಮತ್ತೊಂದು ಎನ್ನುವಂತಾಗಿದೆ. ಇವರಿಗೆ ಜನಪರವಾದ ಕಾಳಜಿಯೇ ಇಲ್ಲ. ಗ್ರಾಹಕರಿಗೆ ಬಂದಿರುವ ವಿದ್ಯುತ್ ಬಿಲ್ ಇದಕ್ಕೆ ಸಾಕ್ಷಿ ಎಂದು ದೂರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಲಾಕ್ ಡೌನ್ ಕಾಲದಲ್ಲಿ ವಿದ್ಯುತ್ ಬಿಲ್ ಏರಿಸಿ ಸರ್ಕಾರ ತಪ್ಪು ಮಾಡಿದೆ. ಆದಷ್ಟು ಬೇಗ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಂಡು ದರ ಏರಿಕೆಯನ್ನು ಹಿಂಪಡೆಯಬೇಕು ಎಂದರು.
ಲಾಕ್ ಡೌನ್ ಅವಧಿಯಲ್ಲಿ ಬೆಸ್ಕಾಂ ದಿಢೀರ್ ವಿದ್ಯುತ್ ಬಿಲ್ ಹೆಚ್ಚಳ ಮಾಡಿದೆ. ಬೆಸ್ಕಾಂನ ಈ ನಡೆಯಿಂದ ಜನ ಕಂಗಾಲಾಗಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಸರ್ಕಾರಕ್ಕೆ ವಿಪಕ್ಷಗಳು ಸಹಕಾರ ನೀಡುತ್ತಿವೆ. ಆದರೆ ಸರ್ಕಾರ ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಇಂತಹ ವಿಷಯಗಳಲ್ಲಿ ಯಾವುದೇ ಕಾರಣಕ್ಕೂ ಸಹಕಾರ ನೀಡುವುದಿಲ್ಲ ಎಂದರು.
ಲಾಕ್ ಡೌನ್ ನಿಂದ ಮೊದಲೇ ಜನ ಸಂಷಕ್ಟಲ್ಲಿದ್ದು, ವಿದ್ಯುತ್ ದರ ಏರಿಕೆ ಜನರ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಇಷ್ಟೊಂದು ಪ್ರಮಾಣದ ದರ ಹೆಚ್ಚಳ ಮಾಡಿದರೆ ಜನ ಎಲ್ಲಿಂದ ಕೊಡುತ್ತಾರೆ. ಮೊಂಡುತನ ಪ್ರದರ್ಶಿಸಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದೀತು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
Follow us on Social media