ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಬಾರದೆಂಬ ಮುಂಜಾಗ್ರತೆಯೊಂದಿಗೆ ಕಲ್ಲಿದ್ದಲು ದಾಸ್ತಾನಿಗೆ ಆದ್ಯತೆ ನೀಡಲಾಗಿದೆ. ವಿದ್ಯುತ್ ಕ್ಷಾಮದ ಬಗ್ಗೆ ಹುಯಿಲೆಬ್ಬಿಸುತ್ತಿರುವ ಕಾಂಗ್ರೆಸ್ ನಾಯಕರದ್ದು ಕೇವಲ ಕಟ್ಟುಕತೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕಲ್ಲಿದ್ದಲು ಕೊರತೆಯಾಗಲೀ, ವಿದ್ಯುತ್ ಕ್ಷಾಮವಾಗಲೀ ರಾಜ್ಯದಲ್ಲಿ ತಲೆದೋರಿಲ್ಲ. ಕಾಂಗ್ರೆಸ್ ಇಲ್ಲದ ಸಮಸ್ಯೆಗಳನ್ನು ಹಿಡಿದುಕೊಂಡು ವ್ಯವಸ್ಥಿತ ಷಡ್ಯಂತ್ರದಲ್ಲಿ ತೊಡಗಿದೆ.
ಸರಾಸರಿ ಬೇಡಿಕೆಯ ಅರ್ಧದಷ್ಟು ಭಾಗ ಸೋಲಾರ್ ಮತ್ತು ಪವನಶಕ್ತಿ ಮೂಲದಿಂದಲೇ ಸಿಗುತ್ತಿರುವಾಗ ವಿದ್ಯುತ್ ಕ್ಷಾಮ ಹೇಗೆ ಉದ್ಭವಿಸುತ್ತದೆ ಎಂದವರು ಪ್ರಶ್ನಿಸಿದರು.ಕೇಂದ್ರದಿಂದ ಪ್ರತಿನಿತ್ಯ ರಾಜ್ಯಕ್ಕೆ ಸರಾಸರಿ 13500 ರಿಂದ 14500 ರೇಕ್ ಕಲ್ಲಿದ್ದಲು ಪೂರೈಕೆ ನಡೆಯುತ್ತಿದೆ.
ಇದು ಎಲ್ಲಾ ವಿದ್ಯುತ್ ಸ್ಥಾವರಗಳಿಗೂ ಸಾಕಾಗುತ್ತದೆ. ಕಲ್ಲಿದ್ದಲು ಕೊರತೆ ಈವರೆಗೆ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ ಎಂದರು.ಕಾಂಗ್ರೆಸ್ ನಡೆಸುತ್ತಿರುವ ಅಪಪ್ರಚಾರ ಸತ್ಯಕ್ಕೆ ದೂರವಾದುದು. ಈ ಬಗ್ಗೆ ಜನ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ವಿದ್ಯುತ್ ವ್ಯತ್ಯಯವು ಸರಬರಾಜಿನಲ್ಲಿ ಆಗುವ ಸಮಸ್ಯೆಯೇ ಹೊರತು ಕಲ್ಲಿದ್ದಲು ಕೊರತೆಯಿಂದ ಅಲ್ಲ ಎಂದವರು ಸ್ಪಷ್ಟಪಡಿಸಿದರು.
Follow us on Social media