ವಿಜಯಪುರ: ಮೇಲ್ಜಾತಿಗೆ ಸೇರಿದ ವ್ಯಕ್ತಿಯ ದ್ವಿಚಕ್ರ ವಾಹನ ಮುಟ್ಟಿದ ಎಂಬ ಕಾರಣಕ್ಕೆ 28 ವರ್ಷದ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಮಿನಜ್ಗಿ ಗ್ರಾಮದಲ್ಲಿ ನಡೆದಿದೆ.
ದಲಿತ ಯುವಕನ ಕುಟುಂಬಸ್ಥರು ಈ ಸಂಬಂಧ ಸ್ಥಳೀಯ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಸ್ .ಸಿ/ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಾಗಿದೆ. ಆದರೆ ಘಟನೆ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ, ಪ್ರಕರಣ ಕಳೆದ ಶನಿವಾರ ನಡೆದಿದೆ.
ಕಾಶಿನಾಥ್ ತಲ್ವಾರ್ ಎಂಬ 28 ವರ್ಷದ ಯುವಕ ದಿನಗೂಲಿ ನೌಕರನಾಗಿದ್ದು ತಾಳಿಕೋಟಿಯ ಮಿನಜ್ಗಿ ಗ್ರಾಮದವನಾಗಿದ್ದಾನೆ. ಆತ ಕಳೆದ ಶನಿವಾರ ತನ್ನ ತಂದೆಯ ಜೊತೆ ಕೆಲಸಕ್ಕೆ ಹೋಗುತ್ತಿದ್ದ. ಹೋಗುವಾಗ ಚೆನ್ನಮ್ಮ ಸರ್ಕಲ್ ನಲ್ಲಿ ನಿಲ್ಲಿಸಿದ್ದ ಮೇಲ್ಜಾತಿ ವ್ಯಕ್ತಿಗೆ ಸೇರಿದ್ದ ಮೋಟಾರ್ ಬೈಕನ್ನು ಮುಟ್ಟಿದನೆಂಬ ಕಾರಣಕ್ಕೆ ಒಂದು ಗುಂಪು ಬಂದು ಹಿಗ್ಗಾಮುಗ್ಗಾ ಹಲ್ಲೆ ಮಾಡಲು ಯತ್ನಿಸಿದರು.
ಅವನನ್ನು ಬಿಡಿಸಲು ಹೋದ ನಾನು, ಮಗನ ಪತ್ನಿ ಮತ್ತು ಅವನ ಮಗಳ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ನಮ್ಮ ಜಾತಿ ಬಗ್ಗೆ ನಿಂದಿಸಿ ಮಾತನಾಡಿದ್ದಲ್ಲದೆ ನಮ್ಮ ಸಮುದಾಯದವರ ಮನೆ ಮೇಲೆ ಬೆಂಕಿ ಇಟ್ಟು ಸುಟ್ಟು ಹಾಕುವುದಾಗಿ ಕೂಡ ಬೆದರಿಕೆ ಹಾಕಿದ್ದಾರೆ ಎಂದು ಯುವಕನ ತಂದೆ ಯಂಕಪ್ಪ ಆರೋಪಿಸಿದ್ದಾರೆ.
ಆದರೆ ಗ್ರಾಮಸ್ಥರು ಹೇಳುವುದೇ ಬೇರೆ. ಆತ ಸುತ್ತಮುತ್ತಲ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಆತನ ದೇಹದ ಖಾಸಗಿ ಭಾಗಗಳನ್ನು ತೋರಿಸಿ ಸಾರ್ವಜನಿಕವಾಗಿ ಕೆಟ್ಟ ವರ್ತನೆ ತೋರಿಸುತ್ತಿದ್ದ, ಈ ಬಗ್ಗೆ ಅವನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಬುದ್ದಿ ಕಲಿಯಲಿಲ್ಲ. ಇದರಿಂದ ಸಿಟ್ಟುಗೊಂಡು ಗ್ರಾಮಸ್ಥರು ಅವನಿಗೆ ಥಳಿಸಿದ್ದಾರೆ ಎಂದು ಹೇಳುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬಸವನ ಬಾಗೇವಾಡಿ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಶಾಂತವೀರ ಇ, ನಾವು ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿದ್ದೇವೆ. ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ 12 ಮಂದಿಯನ್ನು ಗುರುತಿಸಲಾಗಿದ್ದು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ ಎಂದಿದ್ದಾರೆ.
ಗ್ರಾಮದ ಮಹಿಳೆಯರು ಕಾಶಿನಾಥನ ವಿರುದ್ಧ ಕೆಟ್ಟ ವರ್ತನೆ ತೋರಿಸುತ್ತಿದ್ದ ಆರೋಪದ ಮೇಲೆ ದೂರು ಸಲ್ಲಿಸಿದೆ. ತನಿಖೆ ನಡೆಯುತ್ತಿದ್ದು ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಶಾಂತವೀರ ತಿಳಿಸಿದ್ದಾರೆ.
Follow us on Social media