ವಾಷಿಂಗ್ಟನ್ : ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಹೊರಗಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ನಡೆದಿದೆ.
ಜನಾಂಗೀಯ ದ್ವೇಷದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ನಿರತರಾಗಿರುವ ಕೆಲವರು ಪ್ರತಿಮೆ ವಿರೂಪಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್ಡಾ ಅವರು ಪೊಲೀಸರ ವಶದಲ್ಲಿದ್ದಾಗ ಸಾವೀಗೀಡಾಗಿರುವುದನ್ನು ವಿರೋಧಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವವರಿಂದ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿಯಾಗಿದೆ ಎನ್ನಲಾಗುತ್ತಿದೆ. ಯುನೈಡ್ ಸ್ಟೇಟ್ಸ್ ಪಾರ್ಕ್ ಪೊಲೀಸರು ತನಿಖೆ ಕೈಗೊಂಡಿದ್ದು , ಪ್ರಕರಣದ ಕುರಿತು ವಿವರ ನಿರೀಕ್ಷಿಸಲಾಗಿದೆ ಎಂದು ಎಎನ್‌ಐ ಗುರುವಾರ ವರದಿ ಮಾಡಿದೆ.
ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಕೆನ್ ಜಸ್ಟರ್ ಘಟನೆಯ ಕುರಿತು ಕ್ಷಮೆಯಾಚಿಸಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಗಾಂಧಿ ಪ್ರತಿಮೆ ವಿರೂಪಗೊಂಡಿರುವುದನ್ನು ಕಾಣಲು ತುಂಬ ಕಷ್ಟವಾಗುತ್ತಿದೆ. ನಮ್ಮ ಪ್ರಾಮಾಣಿಕ ಕ್ಷಮಾಪಣೆಯನ್ನು ದಯಮಾಡಿ ಸ್ವೀಕರಿಸಿ ಎಂದು ಕೆನ್ ಜಸ್ಟರ್ ಹೇಳಿದ್ದಾರೆ.
Follow us on Social media