ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ನೋಡಿಕೊಂಡು ಲಾಕ್ ಡೌನ್ ವಿಸ್ತರಣೆ ಕುರಿತು ಜೂನ್ 5 ರಂದು ನಿರ್ಧರಿಸಲಾಗುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಜೂನ್ 7ರ ವರೆಗೆ ಎಂದಿನಂತೆ ಲಾಕ್ಡೌನ್ ಇರುತ್ತದೆ. ಜೂನ್ 7ರ ನಂತರ ಲಾಕ್ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದೆನಿಸುತ್ತದೆ. ಆದರೆ ರಾಜ್ಯದ ಸ್ಥಿತಿಗತಿ ನೋಡಿಕೊಂಡು ಲಾಕ್ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ರಾಜ್ಯದ ಜನರು ಸಹಕಾರ ನೀಡಬೇಕು. ಜೂನ್ 7ರ ವರೆಗೆ ರಾಜ್ಯದಲ್ಲಿ ಬಿಗಿ ಕ್ರಮ ಮುಂದುವರಿಯುತ್ತದೆ. ಕೊರೊನಾ ನಿಯಂತ್ರಣ ನೋಡಿಕೊಂಡು ಲಾಕ್ಡೌನ್ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಪಿಎಂ ಕೇರ್ಸ್ ವೆಂಟಿಲೇಟರ್ನಲ್ಲಿ ಸಮಸ್ಯೆ
ಇದೇ ವೇಳೆ ಪಿಎಂ ಕೇರ್ಸ್ ವೆಂಟಿಲೇಟರ್ನಲ್ಲಿ ಕೆಲವೊಂದು ಸಮಸ್ಯೆಯಿದೆ. ಸಮಸ್ಯೆ ಸರಿಪಡಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಸಮಸ್ಯೆ ಸರಿಪಡಿಸಲಾಗುತ್ತದೆ ಎಂದು ಹೇಳಿದರು. ಅಂತೆಯೇ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಲಸಿಕೆ ಪೂರೈಕೆ ಬಗ್ಗೆ ಮಾತಾಡಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಜೊತೆ ಮಾತನಾಡಿದ್ದೇವೆ. ಆದಷ್ಟು ಬೇಗ ಲಸಿಕೆ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಳಸಂತೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧ ಮಾರಾಟ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅಲ್ಲೊಂದು ಇಲ್ಲೊಂದು ಮಾರಾಟ ಪ್ರಕರಣ ಕಂಡುಬರುತ್ತಿದೆ. ಕಾಳಸಂತೆಯಲ್ಲಿ ಔಷಧ ಮಾರುವವರ ವಿರುದ್ಧ ಕ್ರಮ ನಿಶ್ಚಿತ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗೆ ಸೂಚನೆ
2ನೇ ಅಲೆಯಲ್ಲಿ ನಿರೀಕ್ಷೆಗೂ ಮೀರಿ ಕೊವಿಡ್ ಪ್ರಕರಣ ಹೆಚ್ಚಳವಾಗಿದೆ. ಈಗ ಕೊರೊನಾ ಕೇಸ್ ಕಡಿಮೆಯಾಗಿರುವುದು ನೆಮ್ಮದಿ ವಿಚಾರ. ಕೊರೊನಾ ಕಡಿಮೆಯಾಯಿತು ಎಂದು ಸುಮ್ಮನಿರುವಂತಿಲ್ಲ. ಹಳ್ಳಿಗಳಲ್ಲಿ ಹೆಚ್ಚು ಕೊವಿಡ್ ಟೆಸ್ಟ್ ಮಾಡಬೇಕು. ಕೆಲವೊಂದು ಹಳ್ಳಿಗಳಲ್ಲಿ ಒಂದೇ ಒಂದು ಕೇಸ್ ಪತ್ತೆಯಾಗಿಲ್ಲ. ಅಂತಹ ಹಳ್ಳಿಗಳಿಗೆ ಕೊರೊನಾ ಹರಡದಂತೆ ನಿಗಾವಹಿಸಬೇಕು ಎಂದು ಜಿಲ್ಲಾಡಳಿತಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು.