ಬೆಂಗಳೂರು: ರಾಮಮಂದಿರ ನಿರ್ಮಾಣ ಸಾಂಸ್ಕೃತಿಕ ಪರಂಪರೆಯ ಬೆಸುಗೆ ಹಾಗೂ ರಾಷ್ಟ್ರೀಯ ಏಕತೆಯ ಪ್ರತಿಬಿಂಬವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಶಯ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ನನಸಾಗಲು ಇಂದು ಕಾಲ ಕೂಡಿಬಂದಿದೆ. ಇದು ನಮ್ಮೆಲ್ಲರ ಸಂತೋಷದ ಘಳಿಗೆ. ಅದಕ್ಕೂ ಮಿಗಿಲಾಗಿ ಇದು ಭಾವನಾತ್ಮಕ ಸನ್ನಿವೇಶವೆಂಬುದು ನನ್ನ ಅನಿಸಿಕೆ ಎಂದು ಅವರು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಎಲ್ಲರ ಹೃನ್ಮನಗಳಲ್ಲಿ ನೆಲೆಸಿರುವ ರಾಮನ ಎಲ್ಲ ತತ್ವಾದರ್ಶಗಳಿಗೆ ಮಂದಿರವು ಸಂಕೇತವಾಗಲಿ. ಭಾರತದ ಹೆಗ್ಗುರುತಾಗಲಿ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ರಾಮನ ಜನಪರ ಕಾಳಜಿ ಹಾಗೂ ಹೃದಯ ವೈಶಾಲ್ಯ ಈಗಿನ ನಮ್ಮ ಜನಪ್ರತಿನಿಧಿಗಳಿಗೆ ಮೇರು ಪ್ರೇರಣೆಯಾಗಲಿ ಎಂದು ತಿಳಿಸಿದ್ದಾರೆ.
