ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಈ ತಿಂಗಳ 19 ರಂದು ನಡೆಯಲಿರುವ ದೈವಾರ್ಷಿಕ ಚುನಾವಣೆಯಲ್ಲಿ ಈ ಬಾರಿ ಘಟಾನುಘಟಿಗಳು ಸ್ಪರ್ಧಿಸಲಿದ್ದು, ಇದೇ ಮೊದಲ ಬಾರಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಮೇಲ್ಮನೆ ಪ್ರವೇಶಿಸುವುದು ಬಹತೇಕ ಖಚಿತವಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕೃತವಾಗಿ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದಾರೆ.
ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡಿದ್ದ ಖರ್ಗೆ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈಗ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ.
ಈಗಿರುವ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಗೆ 1, ಬಿಜೆಪಿಗೆ 2 ಸ್ಥಾನಗಳು ದೊರೆಯುವುದು ಬಹುತೇಕ ಖಚಿತವಾಗಿದ್ದು, ಮತ್ತೊಂದು ಸ್ಥಾನಕ್ಕಾಗಿ ಕಾಂಗ್ರೆಸ್ – ಜೆಡಿಎಸ್ ನಡುವೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ಜೆಡಿಎಸ್ ನ ಕುಪೇಂದ್ರ ರೆಡ್ಡಿ, ಬಿಜೆಪಿಯ ಪ್ರಭಾಕರ್ ಕೋರೆ, ಕಾಂಗ್ರೆಸ್ ನ ರಾಜೀವ್ ಗೌಡ, ಬಿ.ಕೆ.ಹರಿಪ್ರಸಾದ್ ನಿವೃತ್ತಿಯಾಗುತ್ತಿದ್ದಾರೆ. ಇವರ ಸ್ಥಾನಗಳಿಗೆ ಈಗ ಚುನಾವಣೆ ನಡೆಯಲಿದೆ. ನಾಮ ಪತ್ರ ಸಲ್ಲಿಕೆಗೆ ಜೂನ್ ೯ ಕೊನೆಯ ದಿನವಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ.
Follow us on Social media