Breaking News

ರಾಜ್ಯದ ಜಿಡಿಪಿ 500 ಶತಕೋಟಿ ಡಾಲರ್ ಗೆ ಏರಿಸಲು ಕೈಗಾರಿಕೋದ್ಯಮಿಗಳಿಗೆ ಸರ್ವಸಹಕಾರ : ಡಾ. ಸಿ.ಎನ್. ಅಶ್ವತ್ಥ ನಾರಾಯಣ

ಬೆಂಗಳೂರು: ಮುಂದಿನ 6 ವರ್ಷಗಳಲ್ಲಿ ರಾಜ್ಯವನ್ನು ’ನವ ಕರ್ನಾಟಕ’ವನ್ನಾಗಿ ರೂಪಿಸುವುದೂ ಸೇರಿದಂತೆ, ರಾಜ್ಯದ ಜಿಡಿಪಿ ಪ್ರಮಾಣವನ್ನು 230 ರಿಂದ 500 ಶತಕೋಟಿ ಡಾಲರ್ ಗೆ ಹೆಚ್ಚಿಸುವ ಉದ್ದಿಮೆದಾರರ ಕನಸಿಗೆ ಸರಕಾರ ಸರ್ವರೀತಿಯ ಸಹಕಾರ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಆಶ್ವತ್ಥನಾರಾಯಣ ಹೇಳಿದ್ದಾರೆ.

’ಕೋವಿಡ್ 19 ನಂತರ ಆರ್ಥಿಕತೆಯ ಪುನರುತ್ಥಾನ ಹಾಗೂ ನವ ಕರ್ನಾಟಕ ನಿರ್ಮಾಣ’ ವಿಷಯದ ಬಗ್ಗೆ ಅಸೋಚೋಮ್ ಏರ್ಪಡಿಸಿದ್ದ ವೆಬಿನಾರ್ ನಲ್ಲಿ ಉದ್ದಿಮೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ನಂತರ ಕರ್ನಾಟಕವನ್ನು ಆರ್ಥಿಕ, ಕೈಗಾರಿಕೀಕರಣವಾಗಿ ಹೊಸದಾಗಿ ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಉದ್ದಿಮೆದಾರರ ಜತೆ ಗಟ್ಟಿಯಾಗಿ ನಿಲ್ಲಲಿದೆ, ಕೈಗಾರಿಕೆಗಳಿಗೆ ಬೇಕಾದ ಸರ್ವರೀತಿಯ ಪೂರಕ ವಾತಾವರಣವನ್ನು ಸೃಷ್ಟಿ ಮಾಡಲಿದೆ. ಯಾರೇ ಬಂದು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಕ್ತ ಅವಕಾಶವಿದ್ದು, ನಂತರ ಸರಕಾರದ ಅನುಮತಿ ಕೇಳಿದರೂ ಅಭ್ಯಂತರವಿಲ್ಲ. ಉದ್ಯೋಗಾವಕಾಶ ಸೃಷ್ಟಿ ಮಾಡುವ ಕೈಗಾರಿಕೋದ್ಯಮಕ್ಕೆ ಬೇಕಾದ ಎಲ್ಲ ಸೌಲಭ್ಯ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

‘ನಮ್ಮ ರಾಜ್ಯವನ್ನು ಕೋವಿಡ್-19 ತುಂಬಾ ಬಾಧಿಸಿದೆ. ಸಾಮಾಜಿಕ, ಆರ್ಥಿಕ, ಕೈಗಾರಿಕೆ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಅನೇಕ ಬದಲಾವಣೆಗಳಿಗೆ ಕಾರಣವಾಗಿದೆ. ಸಮಸ್ಯೆಗಳನ್ನು ಸೃಷ್ಟಿಸಿದೆ. ಹೊಸ ಹೊಸ ಸವಾಲುಗಳು ಎದುರಾಗಿವೆ. ಇವೆಲ್ಲವನ್ನು ಸಮರ್ಥವಾಗಿ ಎದುರಿಸಲು ಸರಕಾರಕ್ಕೆ ಉದ್ದಿಮೆದಾರರ ಸಹಕಾರ ಅಗತ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂಬ ಪ್ರಧಾನಿಯವರ ಮಂತ್ರವನ್ನು ನಾವು ಪಾಲಿಸುತ್ತಿದ್ದೇವೆ. ಈ ಮೂಲಕ ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳನ್ನು ಮುನ್ನಡೆಯುವಂತೆ ಮಾಡುವುದು ನಮ್ಮ ಧ್ಯೇಯವಾಗಿದೆ. ಹೀಗಾಗಿ ಮೂರೂ ಕ್ಷೇತ್ರಗಳಿಗೂ ನಾವು ಹೂಡಿಕೆಗೆ ಮುಕ್ತ ಅವಕಾಶ ನೀಡಿದ್ದೇವೆ. ಅಲ್ಲದೆ, ಕೈಗಾರಿಕೆಗಳ ಸ್ಥಾಪನೆ, ಹೊಸ ವ್ಯವಹಾರ ಆರಂಭಕ್ಕಿರುವ ಅಡೆತಡೆಗಳನ್ನು ನಿವಾರಿಸುತ್ತಿದ್ದೇವೆ ಹಾಗೂ ಎಲ್ಲ ಅನುಮತಿಗಳನ್ನು ಕ್ಷಿಪ್ರಗತಿಯಲ್ಲಿ ನೀಡುತ್ತಿದ್ದೇವೆ, ಈ ನಿಟ್ಟಿನಲ್ಲಿ ಎಲ್ಲ ಪ್ರಕ್ರಿಯೆಗಳು ಚುರುಕಾಗಿ ಆರಂಭವಾಗಿವೆ ಎಂದು ಉಪ ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದರು.

ಹೆಚ್ಚು ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಗಾರ್ಮೆಂಟ್ ಉದ್ಯಮಕ್ಕೆ ಸರಕಾರ ಹೆಚ್ಚು ಒತ್ತಾಸೆ ನೀಡುವುದರ ಜತೆಗೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದೆ. ಬೆಂಗಳೂರು ಮಾತ್ರವಲ್ಲದೆ ಅತ್ಯುತ್ತಮ ಮಾನವ ಸಂಪನ್ಮೂಲ ಇರುವ ಗ್ರಾಮೀಣ, ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿದರೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಐಟಿ ಬಿಟಿ ಸೇರಿದಂತೆ ಯಾವುದೇ ಕೈಗಾರಿಕೆ ಇರಲಿ ಕರ್ನಾಟಕದಷ್ಟು ಪ್ರಶಸ್ತ್ಯವಾದ ರಾಜ್ಯ ಮತ್ತೊಂದಿಲ್ಲ. ಕೊರೊನಾದಂಥ ಮಾರಿಯನ್ನು ಹಿಮ್ಮೆಟ್ಟಿಸಿ ಉದ್ದಿಮೆಗಳನ್ನು ಪುನರುಜ್ಜೀವನಗೊಳಿಸಲು ಉದ್ದಿಮೆದಾರರು ಇಡುತ್ತಿರುವ ಹೆಜ್ಜೆಗಳು ಶ್ಲಾಘನೀಯ. ಈ ನಿಟ್ಟಿನಲ್ಲಿ ಎಲ್ಲರಿಗೂ ಸ್ಫೂರ್ತಿಯಾದ ಕೈಗಾರಿಕೋದ್ಯಮಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಡಿಸಿಎಂ ಭರವಸೆ ನೀಡಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ
ಕೈಗಾರಿಕೆಗಳಿಗೆ ಹೆಚ್ಚು ಒತ್ತಾಸೆ ನೀಡಬೇಕು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶಯವೂ ಆಗಿದೆ. ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಯಿತು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಯಿತಲ್ಲದೆ, ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿದ್ದ ಕೆಲ ಪಟ್ಟಭದ್ರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು. ರೈತರು ತಾವು ಬೆಳೆದ ಬೆಳೆಯನ್ನು ಯಾರಿಗೆ ಬೇಕಾದರೂ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯಬಹುದು. ಇದು ನಮ್ಮ ಸರಕಾರ ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸರಕಾರ ಜನರಿಗೆ ತಿಳಿವಳಿಕೆ ಮೂಡಿಸುತ್ತಿದೆ. ಮುಖ್ಯವಾಗಿ ರೈತರಿಗೆ ಭೂಮಿ, ನೀರು, ಗೊಬ್ಬರ ಇತ್ಯಾದಿಗಳನ್ನು ಸದ್ಭಳಕೆ ಮಾಡಿಕೊಳ್ಳುವುದಕ್ಕೆ ಬೇಕಾದ ಸಮಗ್ರ ಮಾಹಿತಿಯನ್ನು ಒದಗಿಸಲಾಗುತ್ತಿದೆ. ರೈತರಿಗೆ ಸಕಾಲಕ್ಕೆ ಉತ್ತಮ ಜ್ಞಾನ ನೀಡುವುದು ಅತಿ ಮುಖ್ಯ ಎಂಬುದನ್ನು ಸರಕಾರ ಮನಗಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಗುರುತರ ಬದಲಾವಣೆಗಳು ಆಗುತ್ತವೆ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ ಎಂದು ಅವರು ಸ್ಪಷ್ಟಪಡಿಸಿದರು. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×