ಬೆಂಗಳೂರು: ರಾಜ್ಯದಲ್ಲಿ 7 ಹೊಸ ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾಗಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 214ಕ್ಕೆ ಏರಿಕೆಯಾಗಿದೆ.
ಆದರೆ, ಶುಕ್ರವಾರದಿಂದ ಈವರೆಗೂ ಯಾವುದೇ ಸಾವುಗಳು ಸಂಭವಿಸಿಲ್ಲ. ರಾಜ್ಯದಲ್ಲಿ ಸೋಂಕಿಗೆ ಈ ವರೆಗೂ 6 ಮಂದಿ ಮೃತಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದ 37 ಮಂದಿ ಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಪ್ರಸ್ತುತ ಸೋಂಕು ದೃಢಪಟ್ಟಿರುವ 7 ಮಂದಿಯಲ್ಲಿ ಐವರು ಮೈಸೂರು ಮೂಲದವರಾಗಿದ್ದು, ಇನ್ನಿಬ್ಬರು ಬೆಂಗಳೂರು ಹಾಗೂ ಬೀದರ್ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ.
ಮೈಸೂರಿನ ಐವರು ಮಂದಿ ಔಷಧಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳಾಗಿದ್ದಾರೆಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಕಂಡು ಬಂದಿರುವ 214 ಮಂದಿಯಲ್ಲಿ 72 ಮಂದಿ ಬೆಂಗಳೂರು, 47 ಮೈಸೂರು ಹಾಗೂ 12 ಮಂದಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡು ಬಂದಿದೆ ಎನ್ನಲಾಗುತ್ತಿದೆ.
ಪ್ರಸ್ತು ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ 37 ಮಂದಿಯಲ್ಲಿ 19 ಜನರು ಬೆಂಗಳೂರು ಮೂಲದವರಾಗಿದ್ದು, ಐವರು ದಕ್ಷಿಣ ಕನ್ನಡ, ಮೂವರು ದಾವಣಗೆರೆ, ಇಬ್ಬರು ಉತ್ತರ ಕನ್ನಡ, 2 ಚಿಕ್ಕಬಳ್ಳಾಪುರ, ಮೈಸೂರು, ಕಲಬುರಗಿ, ಧಾರವಾಡ ಹಾಗೂ ಕೊಡಗಿನಲ್ಲಿ ಒಬ್ಬೊಬ್ಬರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇನ್ನು ಸಾವನ್ನಪ್ಪಿರುವ 6 ಮಂದಿಯಲ್ಲಿ ಇಬ್ಬರು ಕಲಬುರಗಿ, ಒಬ್ಬರು ಬೆಂಗಳೂರು, ಬಾಗಲಕೋಟೆ 1, ಗದಗ 1 ಹಾಗೂ ಒಬ್ಬರು ತುಮಕೂರಿನವರಾಗಿದ್ದಾರೆ.
ರಾಜ್ಯದಲ್ಲಿ ಕೋವಿಡ್ -19 ಹೆಚ್ಚಳದ ಕುರಿತು ಹೇಳಿಕೆಗಳು ಸತ್ಯಕ್ಕೆ ದೂರವಾದವು; ಆರೋಗ್ಯ ಇಲಾಖೆ
ರಾಜ್ಯದಲ್ಲಿ ಒಂದು ತಿಂಗಳಲ್ಲಿ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳು ವರದಿಯಾಗಲಿದ್ದು, ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂಬ ವದಂತಿಗಳು ಸತ್ಯಕ್ಕೆ ದೂರ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಶುಕ್ರವಾರ ಹೈಕೋರ್ಟ್ ಗೆ ರಾಜ್ಯ ಸರ್ಕಾರ ನೀಡಿದ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ. ಈ ತಿಂಗಳಲ್ಲಿ ವರದಿಯಾಗುವ ಪ್ರಕರಣಗಳ ಕುರಿತು ಇಲಾಖೆ ಯಾವುದೇ ಅಂಕಿ ಅಂಶಗಳ ಪಟ್ಟಿ ಮಾಡಿಲ್ಲ. ಎಷ್ಟೇ ಪ್ರಕರಣ ದಾಖಲಾದರೂ ಎದುರಿಸಲು ಸಿದ್ಧ ಎಂದಷ್ಟೇ ಹೇಳಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಮೊದಲು ದೇಶದ ಕೋವಿಡ್-19 ಪ್ರಕರಣಗಳ ಪಟ್ಟಿಯಲ್ಲಿ 3ನೇ ಶ್ರೇಣಿಯಲ್ಲಿದ್ದ ಕರ್ನಾಟಕ ಈಗ 11ನೇ ಸ್ಥಾನಕ್ಕಿಳಿದಿದೆ. ರಾಜ್ಯ ಸರ್ಕಾರ ಮತ್ತು ಇಲಾಖೆಯ ಅಧಿಕಾರಿಗಳು ಸೋಂಕು ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Follow us on Social media