ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ 10 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 180ಕ್ಕೇರಿಕೆಯಾಗಿದೆ.
ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಮೂವರು ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಎಂಬಂತೆ 81 ಜನ ಮೃತಪಟ್ಟಿದ್ದರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ರಾಜ್ಯದಲ್ಲಿ ಹೊಸದಾಗಿ 445 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11005ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಶುಕ್ರವಾರ 246 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 6916ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 3905 ಸಕ್ರಿಯ ಪ್ರಕರಣಗಳಿದ್ದು, 178 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ಪತ್ತೆಯಾದ 445 ಸೋಂಕಿತರ ಪೈಕಿ 21 ಮಂದಿ ಅಂತರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಹಾಗೂ 65 ಮಂದಿ ಹೊರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದು ಬೆಂಗಳೂರಿನಲ್ಲಿ 144, ಕಲಬುರಗಿಯಲ್ಲಿ 42, ಬಳ್ಳಾರಿಯಲ್ಲಿ 47 ಪಾಸಿಟಿವ್ ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 445 ಸೋಂಕಿತರು ಪತ್ತೆಯಾಗಿದ್ದಾರೆ.
