ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆಸಿದ್ದು, ಮಹಾಮಾರಿಗೆ ಗುರುವಾರ ಒಂದೇ ದಿನ ನಾಲ್ವರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ ಇಬ್ಬರು ಹಾಗೂ ದಾವಣಗೆರೆ ಮತ್ತು ಗದಗದಲ್ಲಿ ತಲಾ ಒಬ್ಬರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ.
ಇನ್ನು ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಂದು ಒಂದೇ ದಿನ ಬರೋಬ್ಬರಿ 257 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು 2651 ಸಕ್ರಿಯ ಪ್ರಕರಣಗಳಿದ್ದು, 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಉಡುಪಿಯಲ್ಲಿ 92 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 9, ರಾಯಚೂರಿನಲ್ಲಿ 88, ಮಂಡ್ಯದಲ್ಲಿ 15, ಬೆಳಗಾವಿಯಲ್ಲಿ 12, ಹಾಸನದಲ್ಲಿ 15, ದಾವಣಗೆರೆಯಲ್ಲಿ 13, ಚಿಕ್ಕಬಳ್ಳಾಪುರದಲ್ಲಿ 2, ದಕ್ಷಿಣ ಕನ್ನಡದಲ್ಲಿ 4, ವಿಜಯಪುರ, ಮೈಸೂರು, ಬಳ್ಳಾರಿಯಲ್ಲಿ ತಲಾ 1, ಗದಗದಲ್ಲಿ 2, ತುಮಕೂರಿನಲ್ಲಿ 1, ಹಾವೇರಿಯಲ್ಲಿ 1 ಪ್ರಕರಣ ದೃಢಪಟ್ಟಿದೆ.
ಗದಗದ 44 ವರ್ಷದ ವ್ಯಕ್ತಿ ಜೂನ್ 2ರಂದು ಮೃತಪಟ್ಟಿದ್ದರು. ಇವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ದಾವಣಗೆರೆಯಲ್ಲಿ 83 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಬೆಂಗಳೂರು ನಗರದ 65 ವರ್ಷದ ಮಹಿಳೆ ಹಾಗೂ 60 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.
ಉಡುಪಿ 564 ಪ್ರಕರಣಗಳೊಂದಿಗೆ ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ. 510 ಪ್ರಕರಣಗಳೊಂದಿಗೆ ಕಲಬುರಗಿ ಹಾಗೂ 424 ಸ್ಥಾನಗಳೊಂದಿಗೆ ಬೆಂಗಳೂರು ನಗರ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ರಾಯಚೂರು ನಾಲ್ಕು, ಮಂಡ್ಯ ಐದು ಹಾಗೂ ಯಾದಗಿರಿ ಆರನೇ ಸ್ಥಾನದಲ್ಲಿವೆ.
Follow us on Social media