ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 515 ಪ್ರಕರಣಗಳು ವರದಿಯಾಗಿವೆ. ಇದು ಇಲ್ಲಿಯವರೆಗೂ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣಗಳಾಗಿವೆ.
ಈ ಪೈಕಿ 482 ಮಂದಿ ಅಂತರ್ ರಾಜ್ಯ ಪ್ರಯಾಣಿಕರಾಗಿದ್ದಾರೆ. ಈ ಪೈಕಿ 482 ಮಂದಿ ಅಂತಾರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದು, 472 ಜನರು ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಓರ್ವ ವ್ಯಕ್ತಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 4835ಕ್ಕೇರಿಕೆಯಾಗಿದೆ. ಈ ನಡುವೆ, ಶುಕ್ರವಾರ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು 204 ಪ್ರಕರಣಗಳು ಕಂಡುಬಂದಿದ್ದು,ಯಾದಗಿರಿ -74, ವಿಜಯಪುರ -53, ಕಲಬುರಗಿ- 42, ಬೀದರ್ -39, ಬೆಳಗಾವಿ -36, ಮಂಡ್ಯ -13, ಬೆಂಗಳೂರು ನಗರ- 10, ಬೆಂಗಳೂರು ಗ್ರಾಂ-12, ದಕ್ಷಿಣ ಕನ್ನಡ-08, ಉತ್ತರ ಕನ್ನಡ-07, ಹಾಸನ-03, ಚಿಕ್ಕಬಳ್ಳಾಪುರ-03, ಧಾರವಾಡ-03,ರಾಮನಗರ-02, ದಾವಣಗೆರೆ-01, ಬಾಗಲಕೋಟೆ-01, ಬಳ್ಳಾರಿ -01, ಶಿವಮೊಗ್ಗ, ಚಿತ್ರದುರ್ಗ, ಗದಗ, ತುಮಕೂರು, ರಾಯಚೂರು, ಹಾಗೂ ಕೊಪ್ಪಳ, ಚಿಕ್ಕಮಗಳೂರು, ಕೊಡಗಿನಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.
ಈವರೆಗೂ 57 ಮಂದಿ ಮೃತಪಟ್ಟಿದ್ದು, ಇಂದು 83 ಸೇರಿದಂತೆ ಒಟ್ಟು 1688 ಮಂದಿ ಸಂಪೂರ್ಣ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 3088 ಸಕ್ರಿಯ ಪ್ರಕರಣಗಳಾಗಿದ್ದು, 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಒಟ್ಟು 768 ಪ್ರಕರಣಗಳಿಂದ ಉಡುಪಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, 552 ಪ್ರಕರಣಗಳೊಂದಿಗೆ ಕಲಬುರಗಿ ಎರಡನೇ ಸ್ಥಾನದಲ್ಲಿದೆ. 434 ಪ್ರಕರಣಗಳಿಂದ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಯಾದಗಿರಿ, ರಾಯಚೂರು, ಮಂಡ್ಯ, ಬೆಳಗಾವಿ ನಂತರದ ಸ್ಥಾನಗಳಲ್ಲಿವೆ.
ಇಂದು 64 ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಲಾಗಿದ್ದು, ಒಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಸೋಂಕು ಕಂಡುಬಂದಿದೆ. 13627 ಮಂದಿಯನ್ನು ಪರೀಕ್ಷಿಸಲಾಗಿದ್ದು, 12797 ಮಂದಿಯಲ್ಲಿ ನೆಗೆಟಿವ್ ಬಂದಿದೆ. 515 ಸೋಂಕಿತರಲ್ಲಿ ಸೋಂಕು ಪತ್ತೆಯಾಗಿದೆ. 36787 ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
Follow us on Social media