ನವದೆಹಲಿ: ಭಾರತ ಚೀನಾಕ್ಕೆ ಶರಣಾಗುತ್ತಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸುತ್ತಿದ್ದಂತೆ ಬಿಜೆಪಿ ಅದಕ್ಕೆ ತೀಕ್ಷ್ಮವಾಗಿ ತಿರುಗೇಟು ನೀಡುತ್ತಿದೆ. ಕಾಂಗ್ರೆಸ್ ಗೆ ಚೀನಾದಿಂದ ಹಣ ಪೂರೈಕೆಯಾಗಿದೆ ಎಂದು ನೇರವಾಗಿ ಬಿಜೆಪಿ ಆರೋಪಿಸಿದೆ. ಭಾರತದಲ್ಲಿರುವ ಚೀನಾ ರಾಯಭಾರಿ ಮೂಲಕ ರಾಜೀವ್ ಗಾಂಧಿ ಫೌಂಡೇಶನ್ ಗೆ ಹಣ ಪೂರೈಕೆಯಾಗಿದೆ, ಅದು 2005-06ರಲ್ಲಿ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀವ್ ಗಾಂಧಿ ಫೌಂಡೇಶನ್ ಗೆ ಸಹ ಅಧ್ಯಕ್ಷೆಯಾಗಿದ್ದು ಮಂಡಳಿಯಲ್ಲಿ ಡಾ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪಿ ಚಿದಂಬರಂ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇದ್ದಾರೆ.
2005-06ರ ವಾರ್ಷಿಕ ವರದಿ ಪ್ರಕಾರ ಚೀನಾದ ಪೀಪಲ್ಸ್ ರಿಪಬ್ಲಿಕ್ ರಾಯಭಾರಿ ಮೂಲಕ ರಾಜೀವ್ ಗಾಂಧಿ ಫೌಂಡೇಶನ್ ಹಣ ಪಡೆದಿದೆ. ಸಾಮಾನ್ಯ ದಾನಿಗಳ ಪಟ್ಟಿಯಲ್ಲಿ ಹಣವನ್ನು ನೀಡಲಾಗಿದೆ. ಅಂದರೆ ಅಂದಿನ ಯುಪಿಎ ಸರ್ಕಾರ ಚೀನಾದಿಂದ ಲಂಚ ಪಡೆದಿತ್ತೆ?,ಈ ಹಣ ಪಡೆದ ನಂತರ ಚೀನಾ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಫೌಂಡೇಶನ್ ಶಿಫಾರಸು ಮಾಡಿದ್ದು ಸತ್ಯವಲ್ಲವೇ, ಚೀನಾ ಪರವಾಗಿ ಅಂದು ಭಾರತ ಸರ್ಕಾರ ಮಾತನಾಡಿತ್ತು ಎಂದು ಕಾನೂನು ವ್ಯವಹಾರಗಳ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಸರ್ಕಾರದ ದಾಖಲೆಗಳಲ್ಲಿ ಈ ಕೊಡುಗೆ ಬಗ್ಗೆ ಎಲ್ಲೂ ನಮೂದಿಸಿಲ್ಲ. ಚೀನಾ ರಾಯಭಾರಿ ಮೂಲಕ ಈ ಹಣ ಪಡೆದಿದ್ದರೆ ಅದನ್ನು ಯಾವುದಕ್ಕೆ, ಹೇಗೆ ಬಳಸಿದ್ದರು ಎಂಬ ಬಗ್ಗೆ ಚೀನಾ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ, ಗಡಿ ವಿವಾದವನ್ನು, ಕೊರೋನಾ ಸೋಂಕಿನ ವಿಷಯಗಳನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ಮಾಡುತ್ತಿರುವ ಕುತಂತ್ರವಿದು ಎಂದು ಹೇಳುತ್ತಿದೆ. ಚೀನಾದಿಂದ ಹಣವನ್ನು ಪಾರದರ್ಶಕವಾಗಿ ತೆಗೆದುಕೊಳ್ಳಲಾಗಿದೆ, ಎಲ್ಲಾ ವಿವರಗಳನ್ನು ವೆಬ್ ಸೈಟ್ ನಲ್ಲಿ ಹಾಕಿದ್ದೇವೆ. ಫೌಂಡೇಶನ್ ನ ವಾರ್ಷಿಕ ವರದಿಯಲ್ಲಿ ಕೂಡ ಇದೆ. ಸರ್ಕಾರದ ಪರ ಫೌಂಡೇಶನ್ ಗಳಾದ ಉದಾಹರಣೆಗೆ ವಿವೇಕಾನಂದ ಫೌಂಡೇಶನ್ ಸಹ ವಿವಿಧ ಮೂಲಗಳಿಂದ ಹಣ ಸ್ವೀಕರಿಸಿದೆ, ಅದರರ್ಥ ದೇಶ ವಿರೋಧಿಗಳೆಂದು ಅಲ್ಲ ಎಂದಿದೆ.
Follow us on Social media