ಜೈಪುರ: ರಾಜಸ್ತಾನ ರಾಜಕೀಯ ಬಿಕ್ಕಟ್ಟು ತಾರಕ್ಕೇರಿದ ಬೆನ್ನಲ್ಲಿಯೇ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿರುವ ಸಿಎಂ ಅಶೋಕ್ ಗೆಹ್ಲೋಟ್ ಅವರು, ಅಗತ್ಯ ಬಿದ್ದರೆ ಪ್ರಧಾನಿ ನಿವಾಸಕ್ಕೂ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜಸ್ಥಾನ ರಾಜಭವನದ ಮುಂದೆಯೇ ಶನಿವಾರ ಧರಣಿ ಕೂತಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದೀಗ, ಅನಿವಾರ್ಯತೆ ಸೃಷ್ಟಿಯಾದರೆ ಕಾಂಗ್ರೆಸ್ ಶಾಸಕರು ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇವೆ. ಅಗತ್ಯಬಿದ್ದರೆ ಪ್ರಧಾನಿ ನಿವಾಸದ ಮುಂದೆಯೂ ಧರಣಿ ಕೂರಲಿದ್ದಾವೆ ಎಂದು ಹೇಳಿದ್ದಾರೆ.
ಶನಿವಾರ ಕಾಂಗ್ರೆಸ್ ಶಾಸಕಾಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅಶೋಕ್ ಗೆಹ್ಲೋಟ್ ಅವರು, ಹೋಟೆಲ್ನಲ್ಲಿ ಹೆಚ್ಚು ಸಮಯ ಉಳಿಯಲು ಸಿದ್ಧರಾಗಿ. ಅಗತ್ಯಬಿದ್ದರೆ, ನಾವು ರಾಷ್ಟ್ರಪತಿಯನ್ನು ಭೇಟಿಯಾಗಲು ಹೋಗಲಿದ್ದೇವೆ ಮತ್ತು ಪ್ರಧಾನ ಮಂತ್ರಿಯ ನಿವಾಸದ ಹೊರಗೆ ಧರಣಿ ನಡೆಸಲಿದ್ದೇವೆ ಎಂದು ತಮ್ಮ ಪಕ್ಷದ ಶಾಸಕರಿಗೆ ಹೇಳಿದ್ದಾರೆ.
ಶುಕ್ರವಾರ ಅಧಿವೇಶನ ಕರೆಯಲು ರಾಜ್ಯಪಾಲ ಕಲ್ರಾಜ್ ಮಿಶ್ರಾ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ರಾಜಭವನದ ಮುಂಭಾಗದ ಹುಲ್ಲುಹಾಸಿನ ಮೇಲೆ ಧರಣಿ ಕುಳಿತಿದ್ದರು. ಜೊತೆಗೆ ಅಧಿವೇಶನ ಕರೆಯಿರಿ ಎಂದು ಘೋಷಣೆಗಳನ್ನೂ ಕೂಗಿದ್ದರು. ನಂತರ ಶುಕ್ರವಾರ ರಾತ್ರಿ ಧರಣಿಯನ್ನು ವಾಪಸ್ ಪಡೆಯಲಾಗಿತ್ತು. ಆದರೆ ಗೆಹ್ಲೋಟ್ ಅವರ ಯಾವುದೇ ಪ್ರಯತ್ನಗಳೂ ಫಲಿಸುತ್ತಿಲ್ಲ. ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಕೊನೆಯಾಗುತ್ತಿಲ್ಲ.
Follow us on Social media