ನವದೆಹಲಿ: ಭಾರತ-ರಷ್ಯಾ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 3 ದಿನಗಳ ಕಾಲ ರಷ್ಯಾ ಪ್ರವಾಸ ಕೈಗೊಂಡಿದ್ದು, ಭೇಟಿ ವೇಳೆ ಚೀನಾ ರಕ್ಷಣಾ ಸಚಿವರೊಂದಿಗೂ ಮಾತುಕತೆ ನಡೆಸಲಿದ್ದಾರೆಂಬ ಚೀನಾದ ವರದಿಯನ್ನು ಭಾರತ ತಿರಸ್ಕರಿಸಿದೆ.
2ನೇ ವಿಶ್ವಯುದ್ಧದಲ್ಲಿ ಜರ್ಮನಿ ವಿರುದ್ಧ ಸೋವಿಯತ್ ಒಕ್ಕೂಟ ಜಯ ಸಾಧಿಸಿದ 75ನೇ ವರ್ಷಾಚರಣೆಯ ಪಥಸಂಚಲನ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾರತ ಹಾಗೂ ಚೀನಾದ ಇಬ್ಬರೂ ರಕ್ಷಣಾ ಸಚಿವರು ಪಾಲ್ಗೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಚೀನಾದ ಗ್ಲೋಬಲ್ ಟೈಮ್ಸ್ ವರದಿಯೊಂದನ್ನು ಪ್ರಕಟಿಸಿ, ಚೀನಾ ಹಾಗೂ ಭಾರತದ ರಕ್ಷಣಾ ಸಚಿವರು ಗಡಿ ಸಂಘರ್ಷ ಕುರಿತು ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಿತ್ತು.
ಈ ವರದಿ ಕುರಿತು ರಕ್ಷಣಾ ಸಚಿವಾಲಯದ ವಕ್ತಾರ ಭರತ್ ಭೂಷಣ್ ಬಾಬು ಅವರು ಪ್ರತಿಕ್ರಿಯೆ ನೀಡಿದ್ದು, ಉಭಯ ರಾಷ್ಟ್ರಗಳ ರಕ್ಷಣಾ ಸಚಿವರೊಂದಿಗೆ ಅಂತರ ಯಾವುದೇ ರೀತಿಯ ಮಾತುಕತೆಗಳು ನಡೆದಿಲ್ಲ. ಭಾರತದ ರಕ್ಷಣಾ ಸಚಿವರು ಚೀನಾ ರಕ್ಷಣಾ ಸಚಿವರ ನಡುವೆ ಯಾವುದೇ ರೀತಿಯ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Follow us on Social media