ಅಂಬಾಲಾ(ಹರ್ಯಾಣ): ಫ್ರಾನ್ಸ್ ನಿಂದ ಬುಧವಾರ ಐದು ರಫೇಲ್ ಯುದ್ಧ ವಿಮಾನಗಳು ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ಬಂದಿಳಿಯಲು ಕ್ಷಣಗಣನೆ ಆರಂಭವಾಗಿದ್ದು ಈ ಸಂದರ್ಭದಲ್ಲಿ ತೀವ್ರ ಭದ್ರತೆ ಏರ್ಪಡಿಸಲಾಗಿದೆ.
ಯುದ್ಧ ವಿಮಾನ ಬಂದಿಳಿಯುವ ಸಂದರ್ಭದಲ್ಲಿ ಮತ್ತು ಬಂದಿಳಿದ ಮೇಲೆ ವಾಯುನೆಲೆಯ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳ ಫೋಟೋ ಮತ್ತು ವಿಡಿಯೊಗಳನ್ನು ತೆಗೆಯುವುದನ್ನು ನಿಷೇಧಿಸಲಾಗಿದೆ. ಅಂಬಾಲಾ ವಾಯುನೆಲೆಯ ಸುತ್ತಮುತ್ತ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜನರು ಖಾಸಗಿ ಡ್ರೋನ್ ಗಳನ್ನು ಹಾರಿಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಭದ್ರತೆಯ ಕ್ರಮವಾಗಿ ನಿನ್ನೆಯಿಂದ ಅಂಬಾಲಾದಲ್ಲಿ ಸೆಕ್ಷನ್ 144ನ್ನು ಜಾರಿಗೆ ತರಲಾಗಿದ್ದು, ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ವಾಯುನೆಲೆ ಸುತ್ತಮುತ್ತ, ಧುಲ್ಕೊಟ್, ಬಲ್ದೇವ್ ನಗರ್, ಗರ್ನಾಲಾ ಮತ್ತು ಪಂಜ್ ಖೊರಾದಲ್ಲಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಶೋಕ್ ಶರ್ಮ ತಿಳಿಸಿದ್ದಾರೆ.
ನಿನ್ನೆ ಫ್ರಾನ್ಸ್ ನಿಂದ ಹೊರಟಿರುವ ರಫೇಲ್ ಯುದ್ಧ ವಿಮಾನ 7 ಸಾವಿರ ಕಿಲೋ ಮೀಟರ್ ಹಾರಾಟ ಮಾಡಿ ಆಕಾಶದಲ್ಲಿಯೇ ಇಂಧನವನ್ನು ತುಂಬಿಕೊಂಡು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ತಂಗಿ ಇಂದು ಭಾರತದ ಹರ್ಯಾಣದಲ್ಲಿರುವ ಅಂಬಾಲಾ ವಾಯುನೆಲೆಗೆ ಬಂದಿಳಿಯಲಿದೆ. ವಿಮಾನದಲ್ಲಿ ಮೂರು ಸಿಂಗಲ್ ಸೀಟರ್ ಮತ್ತು ಎರಡು ಅವಳಿ ಸೀಟುಗಳಿರುತ್ತದೆ.
Follow us on Social media