ಮಂಗಳೂರು : ಲಾಕ್ಡೌನ್ ನಿಂದಾಗಿ ಸುಮಾರು 45 ದಿನಗಳಿಂದ ಉತ್ತರ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ವಿದ್ಯಾರ್ಥಿಗಳು ಕೊನೆಗೂ ತವರಿಗೆ ವಾಪಸಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ನವೋದಯ ಶಾಲೆಯ 22 ವಿದ್ಯಾರ್ಥಿಗಳು ಶುಕ್ರವಾರ ಸುರಕ್ಷಿತವಾಗಿ ಊರಿಗೆ ಬಂದಿದ್ದಾರೆ. ನವೋದಯ ವಿದ್ಯಾಲಯದ ಮೈಗ್ರೇಶನ್ ಪಾಲಿಸಿ ಪ್ರಕಾರ ಒಂಭತ್ತನೇ ತರಗತಿಯ ವ್ಯಾಸಂಗಕ್ಕಾಗಿ ಮುಡಿಪುವಿನ ಜವಾಹರ್ ಲಾಲ್ ನವೋದಯದ 22 ವಿದ್ಯಾರ್ಥಿಗಳು ಉತ್ತರ ಪ್ರದೇಶದ ಜೆ.ಪಿ.ನಗರದ ಜವಾಹರ್ ಲಾಲ್ ನವೋದಯ ವಿದ್ಯಾಲಯಕ್ಕೆ ತೆರಳಿದ್ದರು. ವ್ಯಾಸಂಗ ಮುಗಿಸಿ ಇನ್ನೇನು ರಜೆಯಲ್ಲಿ ಮಾ.24ರಂದು ಸ್ವಂತ ಊರಿಗೆ ಮರಳಲು ಸಿದ್ಧರಾಗುತ್ತಿದ್ದರು. ಆದ್ರೆ ಲಾಕ್ ಡೌನ್ ಘೋಷಣೆ ಆಗಿದ್ದರಿಂದ ಬರಲು ಸಾಧ್ಯವಾಗಿರಲಿಲ್ಲ.
ಕೊರೊನಾ ಭಯದ ನಡುವೆ ಪೋಷಕರಿಂದ ದೂರವಿದ್ದು ಆತಂಕ ಎದುರಿಸುತ್ತಿದ್ದರು. ವಿದ್ಯಾರ್ಥಿಗಳ ಪೋಷಕರು ಕೂಡಾ ಚಿಂತೆಗೀಡಾಗಿದ್ದರು. ಹೀಗಾಗಿ ಪ್ರಾಂಶುಪಾಲರು, ವಿದ್ಯಾರ್ಥಿ ಪೋಷಕರು ಸರ್ಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಲ್ಲಿ ಸಮಸ್ಯೆ ಹೇಳಿಕೊಂಡಿದ್ದರು. ಇದರ ಫಲವಾಗಿ ಇದೀಗ ಭಾರತ ಸರ್ಕಾರದ ಗೃಹ ಇಲಾಖೆ ವಿದ್ಯಾರ್ಥಿಗಳನ್ನು ಕೆಎಸ್ಆರ್ಟಿಸಿ ಬಸ್ ಮೂಲಕ ಕಳುಹಿಸಿಕೊಟ್ಟಿದೆ.
ಊರಿಗೆ ತಲುಪುತ್ತಿದ್ದಂತೆ ಮುಡಿಪು ನವೋದಯ ಶಾಲೆಯಲ್ಲೇ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಇಂದಿನಿಂದ ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಶುರುವಾಗಲಿದೆ.
Follow us on Social media